ತಮಿಳುನಾಡು ಸರ್ಕಾರಿ ನೌಕರರಿಗೆ ಶಾಕ್: ಆಸ್ತಿ ವಿವರ ನೀಡದಿದ್ದರೆ ಪ್ರಮೋಷನ್ ಇಲ್ಲ

ಚೆನ್ನೈ: ತಮಿಳುನಾಡು ಸರ್ಕಾರಿ ನೌಕರರಿಗೆ ಅಲ್ಲಿನ ಸರ್ಕಾರ ಕಠಿಣ ಆದೇಶವೊಂದನ್ನು ಹೊರಡಿಸಿದೆ. ಇನ್ಮುಂದೆ ಸರ್ಕಾರಿ ನೌಕರರು ಬಡ್ತಿ (Promotion) ಪಡೆಯಬೇಕಾದರೆ ತಮ್ಮ ಚರ ಹಾಗೂ ಅಚರ ಆಸ್ತಿಪಾಸ್ತಿಗಳ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ಆಸ್ತಿ ವಿವರ ಸಲ್ಲಿಸದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಡ್ತಿ ಪಟ್ಟಿಯಿಂದಲೇ ಹೊರಗಿಡಲಾಗುವುದು ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ.

ಈ ಕುರಿತು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಸಾಯಿಕುಮಾರ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಆದೇಶದಂತೆ, ರಾಜ್ಯ ಸರ್ಕಾರದ ಎಲ್ಲಾ ನೌಕರರು ಅಕ್ಟೋಬರ್ 31 ರೊಳಗಾಗಿ ತಮ್ಮ ಆರ್ಥಿಕ ಹಾಗೂ ಆಸ್ತಿಯ ವಿವರಗಳನ್ನು ಸರ್ಕಾರದ ಅಧಿಕೃತ ‘ಸಮ್ಮಿಳಿತ ಹಣಕಾಸು ಮತ್ತು ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ’ (IFHRMS) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ.

ನಿಗದಿತ ಸಮಯದೊಳಗೆ ಮಾಹಿತಿ ಸಲ್ಲಿಸುವ ನೌಕರರನ್ನು ಮಾತ್ರವೇ ಮುಂದಿನ ಬಡ್ತಿ (ಪ್ರಮೋಷನ್) ಪರಿಶೀಲನಾ ಪಟ್ಟಿಗೆ ಸೇರಿಸಿಕೊಳ್ಳಲಾಗುತ್ತದೆ.

ಬಿನಾಮಿ ಆಸ್ತಿ, ಸಾಲ-ಸೋಲಗಳ ವಿವರವೂ ನೀಡಬೇಕು!:

  • ಎಲ್ಲಾ ಮಾದರಿಯ ಆಸ್ತಿ: ನೌಕರರು ತಮ್ಮ ಹೆಸರಿನಲ್ಲಿರುವ ಚರ ಆಸ್ತಿ (Movable Assets), ಅಚರ ಆಸ್ತಿ (Immovable Assets), ಬ್ಯಾಂಕ್ ಉಳಿತಾಯ ಹಾಗೂ ಪಡೆದಿರುವ ಸಾಲಗಳ (Loans & Liabilities) ಪೂರ್ಣ ಮಾಹಿತಿಯನ್ನು ಘೋಷಿಸಬೇಕು.

  • ಬಿನಾಮಿ ಆಸ್ತಿಗೂ ಕನ್ನ: ಅತ್ಯಂತ ಪ್ರಮುಖವಾಗಿ, ನೌಕರರು ತಮ್ಮ ಹೆಸರಿನಲ್ಲಿ ಅಲ್ಲದೆ ಕುಟುಂಬಸ್ಥರ ಅಥವಾ ಬೇರೆ ಯಾವುದೇ ವ್ಯಕ್ತಿಯ ಹೆಸರಿನಲ್ಲಿ (ಬಿನಾಮಿ) ಆಸ್ತಿ ಖರೀದಿಸಿದ್ದರೆ, ಆ ವ್ಯಕ್ತಿಯ ವಿವರ ಹಾಗೂ ಅವರೊಂದಿಗಿನ ಸಂಬಂಧವನ್ನು ಸ್ಪಷ್ಟವಾಗಿ ನಮೂದಿಸುವುದು ಕಡ್ಡಾಯವಾಗಿದೆ.

  • ಬೇರೆಯವರ ಹೆಸರಿನಲ್ಲಿ ಆಸ್ತಿ ನೋಂದಾಯಿಸಿದ್ದರೂ ಸಹ ನೌಕರರು ಶಿಕ್ಷೆಯಿಂದ ಅಥವಾ ವಿವರ ನೀಡುವ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಇದನ್ನೂ ಓದಿ: ಸುಂದರಿಯರ ಹೆಸರಿನಲ್ಲಿ ನೇವಿ ಸಿಬ್ಬಂದಿಗೆ ಪಾಕ್ ಹನಿಟ್ರ್ಯಾಪ್: ವಾಟ್ಸಾಪ್, ಕ್ರಿಪ್ಟೋ ಮೂಲಕ ಸಾಗುತಿತ್ತು ರಹಸ್ಯ ಮಾಹಿತಿ

ವಿವರ ನೀಡದಿದ್ದರೆ ‘ಸೇವಾ ನಿಯಮಾವಳಿ’ ಉಲ್ಲಂಘನೆ ಕೇಸ್:

ನಿಗದಿತ ಅಂತಿಮ ಗಡುವಿನೊಳಗೆ ಆಸ್ತಿ ವಿವರಗಳನ್ನು ಸಲ್ಲಿಸಲು ವಿಫಲವಾಗುವ ಸರ್ಕಾರಿ ನೌಕರರನ್ನು “ಸರ್ಕಾರಿ ನೌಕರರ ನಡವಳಿಕೆ ನಿಯಮಾವಳಿ”ಗಳನ್ನು ಉಲ್ಲಂಘಿಸಿದವರು ಎಂದು ಪರಿಗಣಿಸಲಾಗುತ್ತದೆ. ಅಂತಹ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ತಮಿಳುನಾಡು ಸರ್ಕಾರದ ಈ ಹಠಾತ್ ಆದೇಶವು ಸರ್ಕಾರಿ ನೌಕರರ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಭ್ರಷ್ಟಾಚಾರಕ್ಕೆ ತಡೆಹಾಕಲು ಹಾಗೂ ಪಾರದರ್ಶಕತೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *