ಸಿನಿಮಾ ರಂಗ ಎಂದರೆ ಕೇವಲ ಕೋಟಿ ಕೋಟಿ ಹಣ, ಗ್ಲಾಮರ್, ಐಷಾರಾಮಿ ಕಾರುಗಳು ಮತ್ತು ಪ್ರಸಿದ್ಧಿ ಮಾತ್ರ ಅಂದುಕೊಳ್ಳುವವರೇ ಹೆಚ್ಚು. ಪ್ರತಿವರ್ಷ ಸಾವಿರಾರು ಯುವಕ-ಯುವತಿಯರು ನಟ-ನಟಿಯರಾಗುವ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಮಾಯಾನಗರಿ ಮುಂಬೈಗೆ ಹೆಜ್ಜೆ ಇಡುತ್ತಾರೆ. ಆದರೆ, ಈ ಬಣ್ಣದ ಲೋಕದ ಭೀಕರ ಹೋರಾಟದಲ್ಲಿ ಗೆದ್ದು ನಿಲ್ಲುವವರು ಕೆಲವೇ ಕೆಲವು ಮಂದಿ ಮಾತ್ರ. ಇನ್ನುಳಿದ ಹಲವರಿಗೆ ಇಲ್ಲಿ ಎದುರಾಗುವ ಸತತ ಸೋಲುಗಳು ಮತ್ತು ಅವಕಾಶಗಳ ಕೊರತೆಯನ್ನು ತಡೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅಂತಹದೇ ಒಂದು ಅತ್ಯಂತ ದುಃಖದಾಯಕ ಮತ್ತು ಕರುಣಾಜನಕ ಕಥೆ ಮಾಜಿ ಭೋಜ್‌ಪುರಿ ನಟಿ ಹಾಗೂ ಮಾಡೆಲ್ ಮಿತಾಲಿ ಶರ್ಮ ಅವರದ್ದು.
ದೆಹಲಿ ಮೂಲದ ಮಿತಾಲಿ ಶರ್ಮ ಮಾಡೆಲಿಂಗ್‌ನಲ್ಲಿ ಹೆಸರು ಮಾಡಿ, ಭೋಜ್‌ಪುರಿ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದರು. ಆದರೆ, ಚಿತ್ರರಂಗದಲ್ಲಿ ಹಂತಹಂತವಾಗಿ ಅವಕಾಶಗಳು ಕೈತಪ್ಪಿದಾಗ ಇವರ ಜೀವನ ಸಂಪೂರ್ಣ ತಲೆಕೆಳಗಾಯಿತು.
ತೀವ್ರ ಆರ್ಥಿಕ ಸಂಕಷ್ಟ ಹಾಗೂ ಮಾನಸಿಕ ಖಿನ್ನತೆಗೆ (Depression) ಒಳಗಾದ ಮಿತಾಲಿ, ಕೊನೆಗೆ ಮುಂಬೈನ ಲೋಕಂಡ್ವಾಲಾ ರಸ್ತೆಗಳಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದ್ದರು. ಅಷ್ಟೇ ಅಲ್ಲದೆ, ಹಸಿವಿನ ತೀವ್ರತೆಯಿಂದ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಯತ್ನಿಸಿದಾಗ ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ವೈರಲ್ ಸುಂದರಿ ಮೊನಾಲಿಸಾಗೆ ಶಾಕ್ ನೀಡಿದ ನಿರ್ದೇಶಕ! ನಟಿಸುತ್ತಿದ್ದ ಮೊದಲ ಸಿನಿಮಾವೇ ರದ್ದು
ಪೊಲೀಸರು ಮಿತಾಲಿ ಶರ್ಮ ಅವರನ್ನು ವಶಕ್ಕೆ ಪಡೆಯಲು ಮುಂದಾದಾಗ, ತೀವ್ರ ಹತಾಶೆಯಲ್ಲಿದ್ದ ಅವರು ಮಹಿಳಾ ಪೊಲೀಸರ ಕೈಗೆ ಕಚ್ಚಿ ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾರೆ. ಕಳೆದ ಹಲವು ದಿನಗಳಿಂದ ಅವರು ಸರಿಯಾಗಿ ಆಹಾರ ಸೇವಿಸದೆ ಕೃಶವಾಗಿದ್ದರು. ಅವರ ಈ ದಯನೀಯ ಸ್ಥಿತಿಯನ್ನು ಕಂಡು ಪೊಲೀಸರೇ ಕಣ್ಣೀರಿಟ್ಟಿದ್ದಾರೆ.
ಪ್ರಸ್ತುತ ಅವರನ್ನು ಮುಂಬೈನ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಚಿತ್ರರಂಗದ ಉತ್ತುಂಗದಲ್ಲಿದ್ದ ನಟಿಯೊಬ್ಬರು ಈ ಮಟ್ಟಕ್ಕೆ ತಲುಪಿರುವುದು ಇಡೀ ಭಾರತೀಯ ಚಿತ್ರರಂಗವೇ ತಲೆತಗ್ಗಿಸುವಂತೆ ಮಾಡಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


