ಫ್ಯಾಟಿ ಲಿವರ್ ಸಮಸ್ಯೆಗೆ ಕೇವಲ ಜಂಕ್ ಫುಡ್ ಕಾರಣವಲ್ಲ!: ತಜ್ಞರ ಸಂಶೋಧನೆಯಲ್ಲಿ ಬಯಲಾಯ್ತು ಮತ್ತೊಂದು ಆಘಾತಕಾರಿ ಸತ್ಯ

ಸಾಮಾನ್ಯವಾಗಿ ಫ್ಯಾಟಿ ಲಿವರ್ ಅಥವಾ ಯಕೃತ್ತಿನ ಕಾಯಿಲೆಯು ಅನಾರೋಗ್ಯಕರ ಆಹಾರ ಪದ್ಧತಿ, ಬೂಜ್ಜು (Obesity) ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದ ಬರುತ್ತದೆ ಎಂದು ಭಾವಿಸಲಾಗಿದೆ. ಆದರೆ, ವಿಶ್ವ ಲಿವರ್ ಆರೋಗ್ಯ ಜಾಗೃತಿ ದಿನಗಳ ಬೆನ್ನಲ್ಲೇ ತಜ್ಞರು ಮತ್ತೊಂದು ಪ್ರಮುಖ ಅಪಾಯಕಾರಿ ಅಂಶವನ್ನು ಎಚ್ಚರಿಸಿದ್ದಾರೆ. ಅದೇನೆಂದರೆ, ಪ್ರತಿದಿನ ಸರಿಯಾಗಿ ನಿದ್ದೆ ಮಾಡದಿರುವುದು ಅಥವಾ ಕಳಪೆ ನಿದ್ದೆಯ ಹವ್ಯಾಸ.

‘ವರ್ಲ್ಡ್ ಜರ್ನಲ್ ಆಫ್ ಹೆಪಟಾಲಜಿ’ (World Journal of Hepatology) ನಿಯತಕಾಲಿಕೆಯಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ನಿದ್ದೆಯ ಕೊರತೆಯು ಫ್ಯಾಟಿ ಲಿವರ್ ರೋಗದ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ‘ಮೆಟಬಾಲಿಕ್ ಡಿಸ್ಫಂಕ್ಷನ್-ಅಸೋಸಿಯೇಟೆಡ್ ಸ್ಟೀಟೋಟಿಕ್ ಲಿವರ್ ಡಿಸೀಸ್’ (MASLD) ಎಂದು ಕರೆಯಲಾಗುತ್ತದೆ.

ನಿದ್ದೆಗೂ ಲಿವರ್ ಆರೋಗ್ಯಕ್ಕೂ ಏನು ಸಂಬಂಧ?:

ಫರಿದಾಬಾದ್‌ನ ಸರ್ವೋದಯ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ತಜ್ಞರಾದ ಡಾ. ಮನೋಜ್ ಯಾದವ್ ಅವರ ಪ್ರಕಾರ, ಲಿವರ್ ನಮ್ಮ ದೇಹದ ಅತ್ಯಂತ ಕಠಿಣವಾಗಿ ಕೆಲಸ ಮಾಡುವ ಅಂಗಗಳಲ್ಲಿ ಒಂದಾಗಿದೆ. ಇದು ದೇಹದ ವಿಷಮುಕ್ತಗೊಳಿಸುವಿಕೆ (Detoxification), ಚಯಾಪಚಯ (Metabolism) ಮತ್ತು ಶಕ್ತಿ ಸಂಗ್ರಹಣೆಯಂತಹ ನೂರಾರು ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸುತ್ತದೆ.

“ಲಿವರ್ ಸಮರ್ಥವಾಗಿ ಕಾರ್ಯನಿರ್ವಹಿಸಲು ದೇಹದ ಆಂತರಿಕ ಗಡಿಯಾರವನ್ನು (Circadian Rhythm) ಅವಲಂಬಿಸಿದೆ. ತಡರಾತ್ರಿ ಎಚ್ಚರವಿರುವುದು ಅಥವಾ ಕಳಪೆ ನಿದ್ದೆಯಿಂದಾಗಿ ಈ ಜೈವಿಕ ಗಡಿಯಾರದ ಲಯ ತಪ್ಪುತ್ತದೆ. ಇದು ಹಾರ್ಮೋನ್ ಸಮತೋಲನವನ್ನು ಕೆಡಿಸಿ, ಇಡೀ ದೇಹದಲ್ಲಿ ಉರಿಯೂತವನ್ನು (Inflammation) ಹೆಚ್ಚಿಸುತ್ತದೆ. ಇದು ಕಾಲಕ್ರಮೇಣ ಫ್ಯಾಟಿ ಲಿವರ್ ಆಗಿ ಬದಲಾಗುತ್ತದೆ,” ಎಂದು ಡಾ. ಮನೋಜ್ ವಿವರಿಸುತ್ತಾರೆ.

ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗುವುದು ಹೇಗೆ?:

ಉದಯ್‌ಪುರದ ಪಾರಸ್ ಹೆಲ್ತ್‌ನ ತಜ್ಞರಾದ ಡಾ. ಶ್ರದ್ಧಾ ಶರ್ಮಾ ಅವರ ಪ್ರಕಾರ, ನಿದ್ದೆಯ ಕೊರತೆಯು ದೇಹದಲ್ಲಿ ಒತ್ತಡದ ಹಾರ್ಮೋನ್‌ಗಳನ್ನು (Stress Hormones) ಹೆಚ್ಚಿಸುತ್ತದೆ. ಇದರಿಂದಾಗಿ ದೇಹವು ಕೊಬ್ಬನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.

ಯಾವಾಗ ನಿದ್ದೆ ನಿರಂತರವಾಗಿ ಕೆಡುತ್ತದೆಯೋ, ಆಗ ದೇಹವು ಇನ್ಸುಲಿನ್ ಪ್ರತಿರೋಧಕ್ಕೆ (Insulin Resistance) ಒಳಗಾಗುತ್ತದೆ. ಈ ಆಂತರಿಕ ಬದಲಾವಣೆಗಳು ಲಿವರ್‌ನಲ್ಲಿ ಕೊಬ್ಬು ಶೇಖರಣೆಯಾಗಲು ಪ್ರೇರೇಪಿಸುತ್ತವೆ. ದೀರ್ಘಕಾಲದ ನಿದ್ದೆಯ ಕೊರತೆಯು ಬೊಜ್ಜು ಮತ್ತು ಮಧುಮೇಹಕ್ಕೆ (Diabetes) ನೇರ ಕಾರಣವಾಗಿದ್ದು, ಇವೆರಡೂ MASLD ಕಾಯಿಲೆಯ ತೀವ್ರತೆಗೆ ಪ್ರಮುಖ ಕಾರಣಗಳಾಗಿವೆ.

ಇದನ್ನೂ ಓದಿ: ರಾತ್ರಿ ಪದೇ ಪದೇ ಕೆಟ್ಟ ಕನಸು ಬೀಳುತ್ತಾ?: ನೆಮ್ಮದಿಯ ನಿದ್ರೆಗೆ ಇಲ್ಲಿದೆ ಸರಳ ‘ಸ್ಲೀಪ್ ಸೈನ್ಸ್’ ಸೂತ್ರ

ನೈಟ್ ಶಿಫ್ಟ್ ಕೆಲಸಗಾರರಿಗೆ ಹೆಚ್ಚಿನ ಅಪಾಯ!:

ರಾತ್ರಿ ಪಾಳಿಯಲ್ಲಿ (Night Shifts) ಕೆಲಸ ಮಾಡುವವರು ಅಥವಾ ಆಗಾಗ್ಗೆ ನಿದ್ದೆಯ ವೇಳಾಪಟ್ಟಿಯನ್ನು ಬದಲಾಯಿಸುವವರು ಈ ಕಾಯಿಲೆಯ ಹೆಚ್ಚಿನ ಅಪಾಯವನ್ನು ಎದುರಿಸುತ್ತಾರೆ. ಜೈವಿಕ ಗಡಿಯಾರದ ಏರುಪೇರಿನಿಂದಾಗಿ ಲಿವರ್‌ಗೆ ಕೊಬ್ಬು ಮತ್ತು ಸಕ್ಕರೆಯ ಚಯಾಪಚಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

ನಿರ್ಲಕ್ಷಿಸಿದರೆ ಕಾಯ್ದಿಟ್ಟಿದೆ ಲಿವರ್ ಕ್ಯಾನ್ಸರ್ ಭೀತಿ!:

ಫ್ಯಾಟಿ ಲಿವರ್ ಕಾಯಿಲೆಯು ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸದೆ ಸದ್ದಿಲ್ಲದೆ ದೇಹವನ್ನು ಆವರಿಸುತ್ತದೆ. ಇದನ್ನು ಆರಂಭದಲ್ಲೇ ಪತ್ತೆ ಹಚ್ಚಿ ಜೀವನಶೈಲಿ ಬದಲಿಸಿಕೊಳ್ಳದಿದ್ದರೆ, ಲಿವರ್‌ನಲ್ಲಿ ತೀವ್ರ ಉರಿಯೂತ ಉಂಟಾಗಿ ಲಿವರ್ ಲಿವರ್ ಸಿರೋಸಿಸ್ (Cirrhosis – ಲಿವರ್ ಹಾನಿ) ಮತ್ತು ಕೆಲವು ಸಂದರ್ಭಗಳಲ್ಲಿ ‘ಲಿವರ್ ಕ್ಯಾನ್ಸರ್’ (Liver Cancer) ಗೆ ದಾರಿ ಮಾಡಿಕೊಡುತ್ತದೆ. ಜೊತೆಗೆ ಹೃದ್ರೋಗದ (Cardiovascular Disease) ಅಪಾಯವೂ ಹೆಚ್ಚುತ್ತದೆ.

ನಿಮ್ಮ ಲಿವರ್ ರಕ್ಷಿಸಿಕೊಳ್ಳಲು ವೈದ್ಯರ ಸರಳ ಸಲಹೆಗಳು:

ಪ್ರತಿದಿನ ರಾತ್ರಿ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ದೆ ಮಾಡಿ.

ಮಲಗುವ ಮತ್ತು ಏಳುವ ಸಮಯವನ್ನು ನಿರಂತರವಾಗಿ ಒಂದೇ ಆಗಿಟ್ಟುಕೊಳ್ಳಿ.

ಪೌಷ್ಟಿಕಾಂಶ ಭರಿತ ಸಮತೋಲಿತ ಆಹಾರ ಸೇವಿಸಿ ಮತ್ತು ನಿರಂತರ ವ್ಯಾಯಾಮ ಮಾಡಿ.

ತೂಕವನ್ನು ನಿಯಂತ್ರಣದಲ್ಲಿಡಿ ಹಾಗೂ ಮಾನಸಿಕ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಿ.

ವೈದ್ಯರ ಸಲಹೆಯ ಮೇರೆಗೆ ಮದ್ಯಪಾನದ ಅಭ್ಯಾಸವನ್ನು ಸಂಪೂರ್ಣವಾಗಿ ಮಿತಿಗೊಳಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು