ರಾತ್ರಿ ಪದೇ ಪದೇ ಕೆಟ್ಟ ಕನಸು ಬೀಳುತ್ತಾ?: ನೆಮ್ಮದಿಯ ನಿದ್ರೆಗೆ ಇಲ್ಲಿದೆ ಸರಳ ‘ಸ್ಲೀಪ್ ಸೈನ್ಸ್’ ಸೂತ್ರ

ದೈನಂದಿನ ಒತ್ತಡ, ಆತಂಕ ಅಥವಾ ತಡರಾತ್ರಿಯ ಜೀವನಶೈಲಿಯಿಂದಾಗಿ ಅನೇಕರಿಗೆ ರಾತ್ರಿಯ ವೇಳೆಯಲ್ಲಿ ಭೀಕರವಾದ ಕೆಟ್ಟ ಕನಸುಗಳು ಬೀಳುತ್ತವೆ. ಇದರಿಂದ ನಿದ್ರೆ ಭಂಗವಾಗುವುದಷ್ಟೇ ಅಲ್ಲದೆ, ಮರುದಿನದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ತೀವ್ರ ಪರಿಣಾಮ ಬೀರುತ್ತದೆ. ಆದರೆ, ವೈಜ್ಞಾನಿಕವಾಗಿ ನಮ್ಮ ಮಲಗುವ ಅಭ್ಯಾಸಗಳನ್ನು (Sleep Hygiene) ಕೊಂಚ ಬದಲಾಯಿಸಿಕೊಳ್ಳುವುದರಿಂದ ಈ ಸಮಸ್ಯೆಗೆ ಸುಲಭವಾಗಿ ಮುಕ್ತಿ ಹಾಡಬಹುದು. ತಜ್ಞರ ಪ್ರಕಾರ ಕೆಟ್ಟ ಕನಸುಗಳನ್ನು ತಡೆಯಲು ಇಲ್ಲಿವೆ ಅತ್ಯಂತ ಪ್ರಮುಖ ಸಲಹೆಗಳು.

ಮಲಗುವ ಮುನ್ನ ಗ್ಯಾಜೆಟ್‌ಗಳಿಗೆ ಬ್ರೇಕ್ ಹಾಕಿ:

ಮಲಗುವ ಕನಿಷ್ಠ 1 ಗಂಟೆ ಮುಂಚಿತವಾಗಿ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಟಿವಿ ನೋಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ. ಇವುಗಳಿಂದ ಹೊರಹೊಮ್ಮುವ ನೀಲಿ ಬೆಳಕು ನಮ್ಮ ಮೆದುಳಿನಲ್ಲಿ ಮೆಲಟೋನಿನ್ ಹಾರ್ಮೋನ್ ಉತ್ಪತ್ತಿಯನ್ನು ಕುಂಠಿತಗೊಳಿಸುತ್ತದೆ. ಅಲ್ಲದೆ, ತಡರಾತ್ರಿ ಹಾರರ್ ಅಥವಾ ಆತಂಕಕಾರಿ ದೃಶ್ಯಗಳನ್ನು ನೋಡುವುದರಿಂದ ಆ ಆಲೋಚನೆಗಳೇ ಕನಸಿನ ರೂಪದಲ್ಲಿ ಕಾಡುತ್ತವೆ.

ತಡರಾತ್ರಿಯ ಭೋಜನ ಮತ್ತು ಕೆಫೀನ್ ಬೇಡ:

ರಾತ್ರಿ ಮಲಗುವ ಮುನ್ನ ಅತಿ ಹೆಚ್ಚು ಮಸಾಲೆಯುಕ್ತ ಅಥವಾ ಭಾರವಾದ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ನಿಧಾನವಾಗಿ, ಮೆದುಳಿನ ಕಾರ್ಯಚಟುವಟಿಕೆ ಹೆಚ್ಚಾಗುತ್ತದೆ. ಇದು ತೀವ್ರವಾದ ಕನಸುಗಳಿಗೆ  ಕಾರಣವಾಗಬಹುದು. ಹಾಗೆಯೇ, ರಾತ್ರಿ ವೇಳೆ ಚಹಾ, ಕಾಫಿ ಅಥವಾ ಆಲ್ಕೋಹಾಲ್ ಸೇವನೆಯು ನಿದ್ರೆಯ ಆವರ್ತನವನ್ನು  ಏರುಪೇರು ಮಾಡುತ್ತದೆ.

ಇದನ್ನೂ ಓದಿ: Health Tips: ಈ 5 ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಅಪಾಯ

ಮಲಗುವ ಮುನ್ನ ‘ಮೈಂಡ್ ರಿಲ್ಯಾಕ್ಸೇಷನ್’ ಅಗತ್ಯ:

ಇಡೀ ದಿನದ ಒತ್ತಡವನ್ನು ಮನಸ್ಸಿನಲ್ಲಿಟ್ಟುಕೊಂಡು ಮಲಗಿದಾಗ ಕೆಟ್ಟ ಕನಸುಗಳು ಬೀಳುವ ಸಾಧ್ಯತೆ ಹೆಚ್ಚು. ಹೀಗಾಗಿ ಮಲಗುವ ಮುನ್ನ 10 ನಿಮಿಷಗಳ ಕಾಲ ಲಘು ಧ್ಯಾನ, ಆಳವಾದ ಉಸಿರಾಟದ ಅಭ್ಯಾಸ  ಅಥವಾ ಮೆಲೋಡಿ ಸಂಗೀತ ಆಲಿಸುವುದರಿಂದ ಮೆದುಳು ಶಾಂತ ಸ್ಥಿತಿಗೆ ತಲುಪುತ್ತದೆ.

ನಿಯಮಿತ ನಿದ್ರೆಯ ಸಮಯ 

ಪ್ರತಿದಿನ ರಾತ್ರಿ ಒಂದೇ ನಿರ್ದಿಷ್ಟ ಸಮಯಕ್ಕೆ ಮಲಗುವುದು ಮತ್ತು ಮುಂಜಾನೆ ಒಂದೇ ಸಮಯಕ್ಕೆ ಏಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ನಿಮ್ಮ ಮಲಗುವ ಕೋಣೆ ಸಂಪೂರ್ಣ ಕತ್ತಲೆಯಿಂದ ಮತ್ತು ತಂಪಾದ ವಾತಾವರಣದಿಂದ ಕೂಡಿರಲಿ. ಇದು ಗಾಢ ನಿದ್ರೆಗೆ (Deep Sleep) ಜಾರಲು ನೆರವಾಗುತ್ತದೆ.

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು