ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ‘ಸುರೇಂದ್ರನಾಥ್ ಕಾಲೇಜಿ’ನಲ್ಲಿ (Surendranath College) ಅತ್ಯಂತ ಆಘಾತಕಾರಿ ರಹಸ್ಯವೊಂದು ಬಯಲಾಗಿದೆ. ಕಾಲೇಜಿನ ಆವರಣದೊಳಗಿರುವ ವಿದ್ಯಾರ್ಥಿ ಸಂಘದ (Student Union) ಕೊಠಡಿಯಲ್ಲಿ ಅಕ್ರಮ ಬೆಡ್ ರೂಮ್ ಇರುವುದು ಪತ್ತೆಯಾಗಿದ್ದು, ಅಲ್ಲಿ ಕೋಟ್ಯಂತರ ರೂಪಾಯಿ ನಗದು, ಮಾರಕಾಸ್ತ್ರ ಮತ್ತು ಆಕ್ಷೇಪಾರ್ಹ ವಸ್ತುಗಳು ಸಿಕ್ಕಿರುವುದು ಇಡೀ ಶಿಕ್ಷಣ ವಲಯ ತಲೆತಗ್ಗಿಸುವಂತೆ ಮಾಡಿದೆ.
ಡೆಂಗ್ಯೂ ತಡೆಗಟ್ಟುವಿಕೆ ತಪಾಸಣೆ ವೇಳೆ ಬಯಲಾದ ಸತ್ಯ!:
ಕಳೆದ ಮೇ 4 ರಂದು ನಡೆದ ವಿದ್ಯಾರ್ಥಿ ಸಂಘದ ಚುನಾವಣಾ ಫಲಿತಾಂಶಗಳ ನಂತರ, ಈ ಕೊಠಡಿಗೆ ಸಂಪೂರ್ಣವಾಗಿ ಬೀಗ ಹಾಕಲಾಗಿತ್ತು. ಪ್ರಸ್ತುತ ಮಳೆಗಾಲ ಆರಂಭವಾಗುತ್ತಿರುವುದರಿಂದ, ಮುನ್ನೆಚ್ಚರಿಕಾ ಕ್ರಮವಾಗಿ ಡೆಂಗ್ಯೂ ತಡೆಗಟ್ಟುವಿಕೆಗಾಗಿ ಪುರಸಭೆಯ ಆರೋಗ್ಯ ತಂಡವು ಕಾಲೇಜು ಆವರಣದ ಸ್ವಚ್ಛತಾ ಪರಿಶೀಲನೆಗಾಗಿ ಭೇಟಿ ನೀಡಿತ್ತು. ಈ ಸಂದರ್ಭದಲ್ಲಿ ದೀರ್ಘಕಾಲದಿಂದ ಮುಚ್ಚಿದ್ದ ಈ ವಿದ್ಯಾರ್ಥಿ ಸಂಘದ ಕೊಠಡಿಯ ಸ್ವಚ್ಛತೆಯೂ ಅತ್ಯಗತ್ಯವಾಗಿತ್ತು. ಹೀಗಾಗಿ, ಕಾಲೇಜು ಅಧಿಕಾರಿಗಳ ಸಮ್ಮುಖದಲ್ಲಿ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿದಾಗ ಅಲ್ಲಿನ ದೃಶ್ಯ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಗೆದ್ದಲು ತಿಂದ 1 ಕೋಟಿ ರೂ. ಮತ್ತು ರಿವಾಲ್ವರ್ ಪತ್ತೆ:
ಕೊಠಡಿಯೊಳಗೆ ಅಕ್ರಮವಾಗಿ ಬೆಡ್ ರೂಮ್ ಸೆಟಪ್ ಮಾಡಲಾಗಿತ್ತು. ಅಲ್ಲಿನ ಹಳೆಯ ಅಲ್ಮೇರಾವೊಂದನ್ನು ತೆರೆದು ಪರಿಶೀಲಿಸಿದಾಗ, ಎರಡು ಚೀಲಗಳಲ್ಲಿ ತುಂಬಿಸಿಡಲಾಗಿದ್ದ 500 ಮತ್ತು 100 ರೂಪಾಯಿ ಮುಖಬೆಲೆಯ ಬರೋಬ್ಬರಿ 1 ಕೋಟಿ ರೂಪಾಯಿ ಪತ್ತೆಯಾಗಿದೆ. ಇಷ್ಟು ದೀರ್ಘಕಾಲ ಹಣವನ್ನು ಮುಚ್ಚಿಟ್ಟಿದ್ದರಿಂದ ಆ ನೋಟುಗಳಿಗೆ ಈಗಾಗಲೇ ಗೆದ್ದಲು ಹಿಡಿದಿರುವುದು ಕಂಡುಬಂದಿದೆ. ಇದರೊಂದಿಗೆ ಅದೇ ಕೊಠಡಿಯಲ್ಲಿ ಒಂದು ಲೋಡೆಡ್ ರಿವಾಲ್ವರ್ ಹಾಗೂ ಕಾಂಡೋಮ್‌ಗಳು ಪತ್ತೆಯಾಗಿವೆ.
ಇದನ್ನೂ ಓದಿ:ನೀರಿನ ಟ್ಯಾಂಕ್‌ನೊಳಗಿನ ಕ್ಲಾಸ್‌ರೂಮ್‌ನಲ್ಲಿ ಅರಳಿತು ವಾಚ್‌ಮನ್ ಮಗಳ ಬದುಕು!
ವಿದ್ಯಾಸಂಸ್ಥೆಯೊಳಗೆ ಇಷ್ಟೊಂದು ದೊಡ್ಡ ಪ್ರಮಾಣದ ನಗದು ಮತ್ತು ಮಾರಕಾಸ್ತ್ರಗಳು ಹೇಗೆ ಬಂದವು? ಇದರ ಹಿಂದೆ ಯಾವ ರಾಜಕೀಯ ನಾಯಕರು ಅಥವಾ ಅಪರಾಧಿಗಳ ಕೈವಾಡವಿದೆ? ಎಂಬ ನಿಟ್ಟಿನಲ್ಲಿ ಕೋಲ್ಕತ್ತಾ ಪೊಲೀಸರು ಮತ್ತು ಉನ್ನತ ತನಿಖಾ ಸಂಸ್ಥೆಗಳು ಕಾಲೇಜು ಆಡಳಿತ ಮಂಡಳಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣ ಇಡೀ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


