ಉಡುಪಿ: ಪೊಲೀಸರನ್ನೇ ಯಾಮಾರಿಸಿ ಓಡಿದ್ದ ಗಡಿಪಾರು ಆರೋಪಿ ಫೈಝಲ್ ಅರೆಸ್ಟ್; ಕಾರಿನಲ್ಲಿ ಸಿಕ್ಕಿತು ಗಾಂಜಾ!

ಉಡುಪಿ: ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ ಜಿಲ್ಲೆಯಿಂದ ಗಡಿಪಾರು ಶಿಕ್ಷೆಗೆ ಒಳಗಾಗಿದ್ದರೂ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಫೈಝಲ್ ಎಂಬುವವನನ್ನು ಕಾರ್ಕಳ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಲ್ಪೆ ಪೊಲೀಸರು ಹೂಡೆ ನಾಗಬ್ರಹ್ಮ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಗಡಿಪಾರು ಆದೇಶ ಜಾರಿ ಮಾಡಲು ಹೋದಾಗ, ಆರೋಪಿ ಫೈಝಲ್ ತನ್ನ ಕಾರನ್ನು ಅತಿ ವೇಗವಾಗಿ ರಿವರ್ಸ್ ಚಲಾಯಿಸಿ ರಸ್ತೆ ಪಕ್ಕದ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದ್ದನು. ಬಳಿಕ ಪೊಲೀಸರ ಕೈಗೆ ಸಿಗದಂತೆ ಅಲ್ಲಿಂದ ಪರಾರಿಯಾಗಿದ್ದನು. ಈ ಘಟನೆಯಲ್ಲಿ ಆತನ ಕಾರು ಸಂಪೂರ್ಣವಾಗಿ ಜಖಂಗೊಂಡಿತ್ತು.

ಆರೋಪಿ ಬಿಟ್ಟು ಹೋಗಿದ್ದ ಕಾರನ್ನು ಪೊಲೀಸರು ತಪಾಸಣೆ ನಡೆಸಿದಾಗ, ಅದರಲ್ಲಿ ಸುಮಾರು 173.42 ಗ್ರಾಂ ಗಾಂಜಾ ಪತ್ತೆಯಾಗಿದೆ. ಇದರ ಅಂದಾಜು ಮೌಲ್ಯ 8,000 ರೂಪಾಯಿ ಎನ್ನಲಾಗಿದೆ. ಆರೋಪಿಯು ಮತ್ತೊಬ್ಬನೊಂದಿಗೆ ಸೇರಿ ಗಾಂಜಾ ಮಾರಾಟ ಮಾಡಲು ಸಂಚು ರೂಪಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಾರಿನಲ್ಲಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ತಂತ್ರಜ್ಞಾನ ದುರುಪಯೋಗ: ಕರಾವಳಿಯಲ್ಲಿ ಸೈಬರ್ ಅಪರಾಧ ಏರಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಮಲ್ಪೆ ಠಾಣೆಯಲ್ಲಿ ದಾಖಲಾಗಿದ್ದ ಈ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಾರ್ಕಳ ಬಂಗ್ಲಗುಡ್ಡೆ ನಿವಾಸಿ ಫೈಝಲ್‌ನ್ನು ಕಾರ್ಕಳ ಉಪನಿರೀಕ್ಷಕರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ರಾಜ್ಯದ ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು