ಪಾಸ್‌ಪೋರ್ಟ್ ಇಲ್ಲದೆ ಭಾರತದಲ್ಲಿದ್ದ ಅಮೆರಿಕನ್ ಪ್ರಜೆ ನೇಪಾಳ ಗಡಿಯಲ್ಲಿ ಲಾಕ್

ಲಕ್ನೋ: ಯಾವುದೇ ಸಿಂಧುತ್ವ ಇರುವ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತ ಪ್ರವೇಶಿಸಿ, ಬರೋಬ್ಬರಿ ಏಳು ತಿಂಗಳ ಕಾಲ ಗೋವಾದಲ್ಲಿ ತಂಗಿದ್ದ ಅಮೆರಿಕದ ಪ್ರಜೆಯೊಬ್ಬ ಇದೀಗ ನೇಪಾಳ ಗಡಿ ದಾಟಲು ಯತ್ನಿಸುವಾಗ ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯ ಸೋನೌಲಿ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ (SSB) ಭದ್ರತಾ ಸಿಬ್ಬಂದಿ ಈತನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿ 36 ವರ್ಷದ ಜೋರ್ಡಾನ್ ಬ್ರೌನ್ (Jordan Brown) ಎಂದು ಗುರುತಿಸಲಾಗಿದೆ. ತಾನು ಅಮೆರಿಕದ ನೌಕಾಪಡೆಯ (US Navy) ಮಾಜಿ ಅಧಿಕಾರಿ ಎಂದು ಈತ ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾನೆ.

ಶನಿವಾರ ಸೋನೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈನಿಹ್ವಾ ಎಂಬಲ್ಲಿ ಗಡಿ ಕಂಬ ಸಂಖ್ಯೆ 516 ರ ಬಳಿ ಎಸ್‌ಎಸ್‌ಬಿಯ 22ನೇ ಬೆಟಾಲಿಯನ್ ವಾಡಿಕೆಯ ಗಸ್ತು ತಿರುಗುತ್ತಿತ್ತು. ಈ ವೇಳೆ ಜೋರ್ಡಾನ್ ಬ್ರೌನ್ ಅನುಮಾನಾಸ್ಪದವಾಗಿ ನೇಪಾಳದೊಳಗೆ ನುಸುಳಲು ಯತ್ನಿಸುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ಆತನನ್ನು ನಿಲ್ಲುವಂತೆ ಸೂಚಿಸಿದಾಗ, ಆತ ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದಾನೆ. ಆದರೆ ಸೈನಿಕರು ಬೆನ್ನಟ್ಟಿ ಆತನನ್ನು ವಶಕ್ಕೆ ಪಡೆದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಬಂಧನದ ವೇಳೆ ಆತನ ಬಳಿ ಯಾವುದೇ ಪಾಸ್‌ಪೋರ್ಟ್, ವೀಸಾ ಅಥವಾ ಭಾರತಕ್ಕೆ ಬಂದಿರುವ ಅಧಿಕೃತ ಗುರುತಿನ ಚೀಟಿಗಳು ಇರಲಿಲ್ಲ ಎಂದು ಮಹಾರಾಜ್‌ಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ASP) ಸಿದ್ದಾರ್ಥ್ ತಿಳಿಸಿದ್ದಾರೆ. ತಲಾಷೆ ನಡೆಸಿದಾಗ ಆತನ ಬಳಿಯಿಂದ 31,460 ರೂಪಾಯಿ ನಗದು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಾರಣೆಯ ವೇಳೆ ಜೋರ್ಡಾನ್ ಬ್ರೌನ್ ತಾನು ಭಾರತಕ್ಕೆ ಬಂದ ಭೀಕರ ಜಾಲವನ್ನು ಬಾಯಿಬಿಟ್ಟಿದ್ದಾನೆ. ಮೊದಲಿಗೆ ಆತ ಟೂರಿಸ್ಟ್ ವೀಸಾ ಮೂಲಕ ಥೈಲ್ಯಾಂಡ್‌ಗೆ ಭೇಟಿ ನೀಡಿದ್ದ. ಅಲ್ಲಿ ತನ್ನ ಪಾಸ್‌ಪೋರ್ಟ್ ಕಳೆದುಕೊಂಡಿದ್ದಾಗಿ ಹೇಳಿದ್ದಾನೆ. ನಂತರ ಅಲ್ಲಿಂದ ಸಮುದ್ರ ಮಾರ್ಗದ ಮೂಲಕ ಶ್ರೀಲಂಕಾವನ್ನು ತಲುಪಿದ್ದ. ಶ್ರೀಲಂಕಾದಿಂದ ಮತ್ತೆ ಸಮುದ್ರ ಮಾರ್ಗವಾಗಿಯೇ 2025ರ ನವೆಂಬರ್ 2 ರಂದು ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಿದ್ದ.ಅಂದಿನಿಂದ ಅಂದರೆ ಕಳೆದ ಸುಮಾರು ಏಳು ತಿಂಗಳಿನಿಂದ ಯಾವುದೇ ದಾಖಲೆಗಳಿಲ್ಲದೆ ಗೋವಾದಲ್ಲಿ ತಲೆಮರೆಸಿಕೊಂಡಿದ್ದ.

ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ‘ಪೋರ್ನ್’ ವೀಕ್ಷಣೆ ನಿಷೇಧ ಮಾಡಿ: ಇದಕ್ಕೆ ಸುಪ್ರೀಂ ಹೇಳಿದ್ದೇನು?

ಇತ್ತೀಚೆಗೆ ಗೋವಾದಿಂದ ಬೆಂಗಳೂರಿಗೆ ಬಂದಿದ್ದ ಜೋರ್ಡಾನ್ ಬ್ರೌನ್, ಬೆಂಗಳೂರಿನಿಂದ ಉತ್ತರ ಪ್ರದೇಶದ ಸೋನೌಲಿ ಗಡಿಗೆ ಬಂದು ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಮಾಸ್ಟರ್ ಪ್ಲಾನ್ ಮಾಡಿದ್ದ. ಸದ್ಯ ಈತನ ವಿರುದ್ಧ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖಾ ಸಂಸ್ಥೆಗಳು ಹೆಚ್ಚಿನ ವಿಚಾರಣೆ ನಡೆಸುತ್ತಿವೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *