ದಿಡುಪೆ ಫಾಲ್ಸ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ಪ್ರವಾಸಿ ಯುವತಿ ಮತ್ತು ಸ್ನೇಹಿತನಿಗೆ ಅಡ್ಡಗಟ್ಟಿ ಜೀವ ಬೆದರಿಕೆ

ಬೆಳ್ತಂಗಡಿ: ಪ್ರಕೃತಿ ಸೌಂದರ್ಯ ಸವಿಯಲು ಜಲಪಾತಕ್ಕೆ ಬಂದಿದ್ದ ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಅಡ್ಡಗಟ್ಟಿ, ಅನ್ಯಧರ್ಮೀಯ ಯುವಕನೊಂದಿಗೆ ಬಂದಿರುವುದನ್ನು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಗಂಭೀರ ಘಟನೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಫಾಲ್ಸ್‌ನಲ್ಲಿ ನಡೆದಿದೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ಯುವತಿಯೊಬ್ಬರು ಈ ಕುರಿತು ಪೊಲೀಸರಿಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಜುಲೈ 12ರ ಭಾನುವಾರದಂದು ರಜೆ ಇದ್ದ ಕಾರಣ ಯುವತಿಯು ತನ್ನ ಸ್ನೇಹಿತನೊಂದಿಗೆ ಪ್ರಸಿದ್ಧ ಪ್ರವಾಸಿ ತಾಣವಾದ ದಿಡುಪೆ ಜಲಪಾತಕ್ಕೆ ಭೇಟಿ ನೀಡಿದ್ದರು.

ದಿಡುಪೆ ಜಲಪಾತದಿಂದ ಮರಳುವಾಗ ಪಾರ್ಕಿಂಗ್ ಪ್ರದೇಶದಲ್ಲಿ ಸುಮಾರು 5 ರಿಂದ 6 ಮಂದಿ ಅಪರಿಚಿತರು ಈ ಜೋಡಿಯನ್ನು ಅಡ್ಡಗಟ್ಟಿದ್ದಾರೆ. ಯುವತಿಯು ಬೇರೆ ಧರ್ಮದ ಯುವಕನ ಜೊತೆ ಬಂದಿದ್ದಾಳೆ ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಿಡಿಗೇಡಿಗಳ ಗುಂಪು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಪ್ರಾಣ ಬೆದರಿಕೆ ಹಾಕಿ ಗೂಂಡಾವರ್ತನೆ ಪ್ರದರ್ಶಿಸಿದೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 75/2026ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ರಂಜಿತ್, ಸುದರ್ಶನ್, ಸ್ವಸ್ತಿಕ್, ಪ್ರದೀಪ್, ದೀಕ್ಷಿತ್ ಹಾಗೂ ಇನ್ನುಳಿದ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS-2023) ಕಲಂ 126(2), 352, 351(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ಪಾಸ್‌ಪೋರ್ಟ್ ಇಲ್ಲದೆ ಭಾರತದಲ್ಲಿದ್ದ ಅಮೆರಿಕನ್ ಪ್ರಜೆ ನೇಪಾಳ ಗಡಿಯಲ್ಲಿ ಲಾಕ್

“ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕ ಆರೋಪಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *