ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಬೆನ್ನಲ್ಲೇ ಎದುರಾಗಿದ್ದ ‘ಮುಖ್ಯಮಂತ್ರಿ ಯಾರು?’ ಎಂಬ ಹತ್ತು ದಿನಗಳ ಸುದೀರ್ಘ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ ಇಂದು (ಮೇ 14) ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ (V.D. Satheesan) ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದೆ.
ಏಪ್ರಿಲ್ 9ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಮೇ 4ರಂದು ಪ್ರಕಟಗೊಂಡಿತ್ತು. 140 ಸದಸ್ಯ ಬಲದ ಕೇರಳ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) 102 ಸ್ಥಾನಗಳನ್ನು ಗೆಲ್ಲುವ ಮೂಲಕ ಹತ್ತು ವರ್ಷಗಳ ಎಲ್ಡಿಎಫ್ (LDF) ಆಡಳಿತಕ್ಕೆ ಅಂತ್ಯ ಹಾಡಿದೆ. ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ ಕೇವಲ 35 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡು ಹೀನಾಯ ಸೋಲು ಅನುಭವಿಸಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ವಿಜಯ್ ‘ವಿಜಯೋತ್ಸವ’: ಅಸೆಂಬ್ಲಿಯಲ್ಲಿ ಭರ್ಜರಿ ಬಹುಮತ ಸಾಬೀತುಪಡಿಸಿದ ಹೊಸ ಸಿಎಂ!
ಸಿಎಂ ರೇಸ್‌ನಲ್ಲಿ ಕೆ.ಸಿ. ವೇಣುಗೋಪಾಲ್ ಮತ್ತು ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಬಲವಾಗಿ ಕೇಳಿಬಂದಿದ್ದವು. ಆದರೆ, ಕಳೆದ ಐದು ವರ್ಷಗಳಲ್ಲಿ ಪ್ರತಿಪಕ್ಷದ ನಾಯಕರಾಗಿ ಎಲ್ಡಿಎಫ್ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಡಿದ ಮತ್ತು ಯುವಕರ ಬೆಂಬಲ ಹೊಂದಿರುವ ವಿ.ಡಿ.ಸತೀಶನ್ ಅವರ ಬೆನ್ನಿಗೆ ಹೈಕಮಾಂಡ್ ನಿಂತಿದೆ. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನಡೆಸಿದ ಸರಣಿ ಸಭೆಗಳ ನಂತರ ಈ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


