ಸಮಸ್ತಿಪುರ (ಬಿಹಾರ): ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2026 ರಲ್ಲಿ ಅತಿ ಹೆಚ್ಚು ರನ್ ಗಳಿಸಿ ಆರೆಂಜ್ ಕ್ಯಾಪ್ (Orange Cap) ಮುಡಿಗೇರಿಸಿಕೊಂಡು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿರುವ ಬಿಹಾರದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ (Vaibhav Sooryavanshi) ಅವರ ಕುಟುಂಬದ ಮತ್ತೊಬ್ಬ ಆಟಗಾರ ಈಗ ಕ್ರಿಕೆಟ್ ಲೋಕದಲ್ಲಿ ಭಾರಿ ಸದ್ದು ಮಾಡುತ್ತಿದ್ದಾನೆ. ಹೌದು, ವೈಭವ್ ಸೂರ್ಯವಂಶಿ ಅವರ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ (Aashirwad Sooryavanshi) ಸ್ಥಳೀಯ ಪಂದ್ಯವೊಂದರಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ವೈಭವ್ ಸೂರ್ಯವಂಶಿ ಭಾರತದ ಹೆಸರನ್ನು ಬೆಳಗಿಸಲು ಸಜ್ಜಾಗುತ್ತಿದ್ದರೆ, ಇತ್ತ ಅವರ ತಮ್ಮ ಆಶೀರ್ವಾದ್ ಬಿಹಾರದ ಸಮಸ್ತಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯವೊಂದರಲ್ಲಿ ‘ಕ್ರಿಕೆಟ್ ಅಕಾಡೆಮಿ ತಾಜ್‌ಪುರ’ ಪರ ಆಡುತ್ತಾ ಅಬ್ಬರಿಸಿದ್ದಾರೆ. ಕೇವಲ 87 ಎಸೆತಗಳನ್ನು ಎದುರಿಸಿದ ಆಶೀರ್ವಾದ್ 20 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ನೆರವಿನಿಂದ 118.39 ರ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 103 ರನ್ ಚಚ್ಚಿದ್ದಾರೆ. ತಮ್ಮನ ಈ ಶತಕದ ಬೆನ್ನಲ್ಲೇ ಅಣ್ಣ ವೈಭವ್ ಸೂರ್ಯವಂಶಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ತಮ್ಮನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಐಪಿಎಲ್ 2026 ರಲ್ಲಿ ಒಟ್ಟು 16 ಪಂದ್ಯಗಳನ್ನು ಆಡಿದ್ದ ವೈಭವ್ ಸೂರ್ಯವಂಶಿ 776 ರನ್ ಗಳಿಸುವ ಮೂಲಕ ಸಾಯಿ ಸುದರ್ಶನ್, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರಂತಹ ದಿಗ್ಗಜರನ್ನೇ ಹಿಂದಿಕ್ಕಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಈ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಜೂನ್ 6 ರಂದು ಅವರಿಗೆ ಭಾರತ ತಂಡಕ್ಕೆ (India Call-up) ಚೊಚ್ಚಲ ಪ್ರವೇಶ ಸಿಕ್ಕಿತ್ತು. ವೈಭವ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಬಿಹಾರದ ಸಮಸ್ತಿಪುರ ಜಿಲ್ಲೆಯ ಅವರ ತಾಯ್ನಾಡು ತಾಜ್‌ಪುರ ಗ್ರಾಮದಲ್ಲಿ ದೀಪಾವಳಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ನೆರೆಹೊರೆಯವರು, ಬಂಧು-ಮಿತ್ರರು ವೈಭವ್ ಮನೆಗೆ ಲಗ್ಗೆ ಇಟ್ಟು ಪಟಾಕಿ ಸಿಡಿಸಿ, ಲಾಡು ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಲೋಕದ ‘ಜೆಂಟಲ್‌ಮನ್’ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ
ಮಗ ಭಾರತ ತಂಡಕ್ಕೆ ಆಯ್ಕೆಯಾದ ದಿನದಿಂದಲೂ ವೈಭವ್ ಅವರ ತಂದೆ ಸಂಜೀವ್ ಸೂರ್ಯವಂಶಿ ಅವರ ಸಂತಸ ಮುಗಿಲು ಮುಟ್ಟಿದೆ. ಈ ಕುರಿತು ಐಎಎನ್‌ಎಸ್ (IANS) ಸುದ್ದಿ ಸಂಸ್ಥೆಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಅವರು, “ನಾವು ಮನೆಯಲ್ಲಿ ಕುಳಿತು ಒಳ್ಳೆಯ ಸುದ್ದಿ ಕೇಳಲು ಕಾಯುತ್ತಿದ್ದೆವು. ಅಧಿಕೃತ ಪ್ರಕಟಣೆ ಹೊರಬಿದ್ದಾಗ ನಮಗೆ ಅಪಾರ ಸಂತೋಷವಾಯಿತು. ನಮ್ಮ ಇಡೀ ಕುಟುಂಬ, ಗ್ರಾಮಸ್ಥರು ಮನೆಗೆ ಬಂದು ಶುಭ ಕೋರಿದರು. ಸಿಹಿ ಹಂಚಿ ಸಂಭ್ರಮಿಸಿದರು. ವೈಭವ್ ದೇಶಕ್ಕಾಗಿ ಆಡಬೇಕೆಂಬ ತನ್ನ ಗುರಿಗಾಗಿ ಬಾಲ್ಯದಿಂದಲೂ ಅತ್ಯಂತ ಕಷ್ಟಪಟ್ಟಿದ್ದಾನೆ. ಇಂದು ಅವನ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು, ದೇಶದ ಪರ ಆಡುವ ಸೌಭಾಗ್ಯ ಅವನಿಗೆ ದೊರೆತಿದೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


