ಮಂಚಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ ಇದರ ವತಿಯಿಂದ ಮಂಚಿ – ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ‘ಮಹಿಳಾ ಸಬಲೀಕರಣ ಮತ್ತು ಮಕ್ಕಳ ಸುರಕ್ಷತೆ’ ಕುರಿತು ಜಾಗೃತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲೆಯ ಸುಮಾರು 300 ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಎದುರಿಸುವ ವಿವಿಧ ರೀತಿಯ ಕಿರುಕುಳಗಳು ಹಾಗೂ ಅಂತಹ ಸಂದರ್ಭಗಳಲ್ಲಿ ತತ್‌ಕ್ಷಣವೇ ಪ್ರತಿಭಟಿಸುವುದು ಅಥವಾ ವಿರೋಧ ವ್ಯಕ್ತಪಡಿಸುವುದು ಹೇಗೆ ಎಂಬ ಕುರಿತು ಸಂಪೂರ್ಣ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಂಗಳೂರಿನ ಸಖಿ-1 ಸ್ಟಾಪ್ ಸೆಂಟರ್‌ನ ಆಡಳಿತಾಧಿಕಾರಿ ಶ್ರೀಮತಿ ಪ್ರಿಯಾ ರಾಜ್‌ಮೋಹನ್ ಮಾತನಾಡಿ, “ಹದಿಹರೆಯದ ಹುಡುಗ-ಹುಡುಗಿಯರು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗಿ ದಾರಿತಪ್ಪುತ್ತಿರುವುದಕ್ಕೆ ಮಾರ್ಗದರ್ಶನ ಹಾಗೂ ಅರಿವಿನ ಕೊರತೆಯೇ ಮುಖ್ಯ ಕಾರಣ. ಸುತ್ತಮುತ್ತ ನಡೆಯುವ ದೌರ್ಜನ್ಯಗಳಿಂದ ಮುಕ್ತರಾಗಲು ವಿದ್ಯಾರ್ಥಿಗಳು ತಮ್ಮ ಆಪ್ತರಾದ ತಂದೆ-ತಾಯಿ, ನಂಬಿಕಸ್ಥರು, ಶಿಕ್ಷಕರು ಅಥವಾ ಸಂಬಂಧಪಟ್ಟ ಇಲಾಖೆಗಳ ತಕ್ಷಣದ ನೆರವು ಪಡೆಯಬೇಕು” ಎಂದು ಕಿವಿಮಾತು ಹೇಳಿದರು.
ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಾರದ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯಿಂದ ಹಮ್ಮಿಕೊಳ್ಳುವ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಭವಿಷ್ಯದ ಹಿತದೃಷ್ಟಿಯಿಂದ ಸಕಾರಾತ್ಮಕವಾಗಿ ಸ್ವೀಕರಿಸಿ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕರಾದ ಶ್ರೀಮತಿ ಅನುಷ್ಯಾ ಮಾತನಾಡಿ, ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಸುಂದರ ದಿನಗಳನ್ನು ಸಂಭ್ರಮದಿಂದ ಕಳೆಯಬೇಕು ಎಂದು ಆಶಂಸನೆ ವ್ಯಕ್ತಪಡಿಸಿದರು.
ಇದನ್ನೂ ಓದಿ: NEET UG 2026: ಕಲ್ಲಡ್ಕ ಶ್ರೀರಾಮ ಪ.ಪೂ. ವಿದ್ಯಾಲಯದ ವಿದ್ಯಾರ್ಥಿನಿ ವಾಸವಿ ಕೆ.ಸಿ. ಅದ್ವಿತೀಯ ಸಾಧನೆ
ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಕಲಾ ಶಿಕ್ಷಕ ಜಗನ್ನಾಥ ಪುರುಷ ಸ್ವಾಗತಿಸಿದರು. ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಶಾಂತ ವಂದನಾರ್ಪಣೆ ಮಾಡಿದರು. ತಾರಾನಾಥ್ ಕೈರಂಗಳ ಅವರು ಕಾರ್ಯಕ್ರಮ ನಿರೂಪಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

