ಅಮೆರಿಕದಲ್ಲಿ ಭೀಕರ ದುರಂತ: ಮದ್ಯದ ಅಮಲಿನಲ್ಲಿ ಸಲೂನ್‌ಗೆ ಕಾರು ನುಗ್ಗಿಸಿ ನಾಲ್ವರನ್ನು ಕೊಂದ ಪಾಪಿ

ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ರಾಜ್ಯದ ಡೀರ್ ಪಾರ್ಕ್‌ನಲ್ಲಿರುವ ‘ಹವಾಯಿ ನೇಲ್ಸ್ ಆಂಡ್ ಸ್ಪಾ’ (Hawaii Nails and Spa) ಸಲೂನ್ ಒಳಗೆ ಕಾರು ನುಗ್ಗಿಸಿ ನಾಲ್ಕು ಜನರ ಸಾವಿಗೆ ಹಾಗೂ ಒಂಬತ್ತು ಜನರ ತೀವ್ರ ಗಾಯಕ್ಕೆ ಕಾರಣವಾಗಿದ್ದ 66 ವರ್ಷದ ವೃದ್ಧ ಸ್ಟೀವನ್ ಶ್ವಾಲಿ (Steven Schwally) ಎಂಬಾತನನ್ನು ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ. 2024 ರಲ್ಲಿ ನಡೆದಿದ್ದ ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಜೂನ್ 4 ರಂದು ನಡೆದ ವಿಚಾರಣೆಯಲ್ಲಿ, ಆರೋಪಿಯ ಮೇಲಿನ 4 ಸೆಕೆಂಡ್ ಡಿಗ್ರಿ ಮರ್ಡರ್ (ಕೊಲೆ) ಸೇರಿದಂತೆ ಒಟ್ಟು 30 ಅಪರಾಧ ಆರೋಪಗಳು ಸಾಬೀತಾಗಿವೆ ಎಂದು ನ್ಯಾಯಾಲಯ ಪ್ರಕಟಿಸಿದೆ. ಇತ್ತೀಚೆಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರಿಂದ ಆರೋಪಿ ತೀರ್ಪಿನ ವೇಳೆ ಕೋರ್ಟ್‌ನಲ್ಲಿ ಉಪಸ್ಥಿತರಿರಲಿಲ್ಲ.

ವರದಿಗಳ ಪ್ರಕಾರ, ಜೂನ್ 28, 2024 ರ ಮಧ್ಯಾಹ್ನ ಮದ್ಯಪಾನ ಮಾಡಿದ್ದ ಸ್ಟೀವನ್ ಶ್ವಾಲಿ, ತನ್ನ ಕಾರನ್ನು ವೇಗದಲ್ಲಿ ಚಲಾಯಿಸಿಕೊಂಡು ಬಂದು ನೇರವಾಗಿ ಸಲೂನ್ ಗೋಡೆಗೆ ಡಿಕ್ಕಿ ಹೊಡೆದಿದ್ದನು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಭೀಕರ ಡಿಕ್ಕಿಯ ತೀವ್ರತೆಗೆ ಸಲೂನ್ ಒಳಗೆ ದೊಡ್ಡ ಸ್ಫೋಟ ಸಂಭವಿಸಿತ್ತು ಮತ್ತು ಒಳಗಿದ್ದ ಜನರ ದೇಹಗಳು ಎಲ್ಲೆಂದರಲ್ಲಿ ಹಾರಿಬಿದ್ದಿದ್ದವು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ನ್ಯಾಯಧೀಶರು ಪರಿಶೀಲಿಸಿದ್ದು, ಅಪಘಾತದ ತೀವ್ರತೆಗೆ ನಾಲ್ವರು ಮೃತದೇಹಗಳು ಕಾರಿನ ಅಡಿಯಲ್ಲೇ ಸಿಲುಕಿಕೊಂಡಿದ್ದವು.

ಈ ಭೀಕರ ದುರಂತದಲ್ಲಿ ನ್ಯೂಯಾರ್ಕ್ ಪೊಲೀಸ್ ಇಲಾಖೆಯ (NYPD) ರಜೆಯಲ್ಲಿದ್ದ ಮಹಿಳಾ ಅಧಿಕಾರಿ ಎಮಿಲಿಯಾ ರೆನ್‌ಹ್ಯಾಕ್ ಹಾಗೂ ಸಲೂನ್ ನೌಕರರಾದ ಜಿಯಾನ್‌ಕೈ ಚೆನ್, ಯಾನ್ ಕ್ಸು ಮತ್ತು ಮೇಯಿಜಿ ಜಾಂಗ್ ಎಂಬ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರು. ಅಪಘಾತದ ನಂತರ ದುರಹಂಕಾರದಿಂದ ಮಾತನಾಡಿದ್ದ ಆರೋಪಿ ಸ್ಟೀವನ್, “ನಾನು ಯಾವುದೇ ಕಾನೂನು ಮುರಿದಿಲ್ಲ, ನಾನು ಮಾಜಿ ಮೆರೈನ್ ಕಮಾಂಡೋ” ಎಂದು ಕೂಗಾಡಿದ್ದನು.

ಆರೋಪಿಯ ರಕ್ತ ತಪಾಸಣೆ ನಡೆಸಿದಾಗ ಆಲ್ಕೋಹಾಲ್ ಪತ್ತೆಯಾಗಿತ್ತು. ಪ್ರಾಸಿಕ್ಯೂಟರ್‌ಗಳ ಪ್ರಕಾರ, ಆರೋಪಿ ಅಪಘಾತದ ಹಿಂದಿನ ರಾತ್ರಿ ಬೆಳಗಿನ ಜಾವ 3 ರಿಂದ 4 ಗಂಟೆಯವರೆಗೆ ಬರೋಬ್ಬರಿ 18 ಬಾಟಲಿ ಬಿಯರ್‌ಗಳನ್ನು ಕುಡಿದಿದ್ದನು. ತನಿಖಾಧಿಕಾರಿಗಳ ಮುಂದೆ ತಾನು ಕುಡಿದಿರುವುದು ನಿಜ ಆದರೆ ಅಪಘಾತದ ಬಗ್ಗೆ ಹೆಚ್ಚು ನೆನಪಿಲ್ಲ ಎಂದು ಒಪ್ಪಿಕೊಂಡಿದ್ದನು. ಆರೋಪಿಗೆ ಈ ಹಿಂದೆ 2013 ರಲ್ಲೂ ಕುಡಿದು ವಾಹನ ಚಾಲನೆ ಮಾಡಿದ (DWI) ಇತಿಹಾಸವಿತ್ತು.

ಇದನ್ನೂ ಓದಿ: ಅಮೆರಿಕದಲ್ಲಿ ಕರುಳು ಹಿಂಡುವ ಘಟನೆ: 10 ವರ್ಷದ ಬಾಲಕಿಯ ಭೀಕರ ಹತ್ಯೆಗೈದ ಪಾಪಿ ತಂದೆ ಅರೆಸ್ಟ್!

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು