ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲಿ ಸಿನಿಮಾ ಕಥೆಯನ್ನೂ ಮೀರಿಸುವಂತಹ ಹನಿಟ್ರ್ಯಾಪ್ ಮತ್ತು ಮಹಾ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಉದ್ಯಮಿಯೊಬ್ಬರ ಅಶ್ಲೀಲ ವಿಡಿಯೋ ಬಳಸಿ, ಬಳಿಕ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ನಕಲಿ ಕಥೆ ಸೃಷ್ಟಿಸಿ ಬರೋಬ್ಬರಿ 2 ಕೋಟಿ 77 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮತ್ತು ಆತನ ಸಹಚರ ಜಿತೇಶ್ ಎಂಬಾತನನ್ನು ಉರ್ವಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, 2024 ರಲ್ಲಿ ಜಿತೇಶ್ ಎಂಬಾತ ಮಂಗಳೂರಿನ ಪ್ರಸಿದ್ಧ ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿದ್ದನು. ಉದ್ಯಮಿ ಜೊತೆಗಿನ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಇಟ್ಟುಕೊಂಡು, “ನಿನ್ನ ಪತ್ನಿಗೆ ಇದನ್ನು ತೋರಿಸುತ್ತೇನೆ” ಎಂದು ಬೆದರಿಸಿ 35 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನು. ಮರ್ಯಾದೆಗೆ ಹೆದರಿದ ಉದ್ಯಮಿ ಚೆಕ್ ಮೂಲಕ ಆತನಿಗೆ ಹಣ ನೀಡಿದ್ದರು. ಆದರೆ, ಜಿತೇಶ್ ಮತ್ತೆ ಮತ್ತೆ ಹಣಕ್ಕಾಗಿ ಪೀಡಿಸಲು ಶುರು ಮಾಡಿದಾಗ, ಉದ್ಯಮಿ ತಮಗೆ ಪರಿಚಯವಿದ್ದ ಯುವ ಕಾಂಗ್ರೆಸ್ ಮುಖಂಡ ನಿಝಾಮ್‌ನ ಸಹಾಯ ಕೋರಿದ್ದರು.
ಇದನ್ನೂ ಓದಿ:Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ದೈಹಿಕ ಶಿಕ್ಷಕನಿಗೆ ಶಿಕ್ಷೆ ಪ್ರಕಟ
ಉದ್ಯಮಿಗೆ ಸಹಾಯ ಮಾಡುವ ನಟನೆಯೊಂದಿಗೆ ಎಂಟ್ರಿ ಕೊಟ್ಟ ನಿಝಾಮ್, ಉದ್ಯಮಿಗೆ ಬೆಂಬಲ ನೀಡುವ ಬದಲು ಜಿತೇಶ್ ಜೊತೆ ಕೈಜೋಡಿಸಿ ದೊಡ್ಡ ಮಟ್ಟದ ಲೂಟಿಗೆ ಸ್ಕೆಚ್ ಹಾಕಿದ್ದನು. 2024ರ ಮೇ ತಿಂಗಳಲ್ಲಿ “ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂಬ ಸುಳ್ಳು ಕಥೆಯನ್ನು ನಿಝಾಮ್ ಸೃಷ್ಟಿಸಿದ್ದನು. ಅಷ್ಟೇ ಅಲ್ಲದೆ, “ಜಿತೇಶ್ ಬರೆದಿರುವ ಡೆತ್ ನೋಟ್‌ನಲ್ಲಿ ನಿನ್ನ ಹೆಸರಿದೆ. ಪೊಲೀಸರು ನಿನ್ನನ್ನು ಜೈಲಿಗೆ ತಳ್ಳುತ್ತಾರೆ” ಎಂದು ಹೆದರಿಸಿದ್ದನು. ನಂಬಿಕೆ ಹುಟ್ಟಿಸಲು ಜಿತೇಶ್ ನೇಣಿಗೆ ಶರಣಾದ ನಕಲಿ ಫೋಟೋ ಹಾಗೂ ಅಂತ್ಯಕ್ರಿಯೆಯ ಎಡಿಟೆಡ್ ಫೋಟೋಗಳನ್ನು ತೋರಿಸಿ ಉದ್ಯಮಿಯನ್ನು ಸಂಪೂರ್ಣವಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದನು. ಜೈಲು ವಾಸ ಹಾಗೂ ಮರ್ಯಾದೆಗೆ ಹೆದರಿದ ಉದ್ಯಮಿ, 2024 ರಿಂದ 2026 ರವರೆಗೆ ಎರಡು ವರ್ಷಗಳ ಕಾಲ ನಿಝಾಮ್ ಕೇಳಿದ ಕಡೆಗೆ ಹಂತಹಂತವಾಗಿ ಒಟ್ಟು 2 ಕೋಟಿ 77 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿದ್ದನು.
ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


