ದೆಹಲಿ: ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು (ಜೂನ್ 10, 2026) ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಂತ್ರ ಭಾರತದಲ್ಲಿ ಸತತವಾಗಿ ಅತಿ ದೀರ್ಘ ಅವಧಿಗೆ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಪರಮೋಚ್ಚ ಪ್ರಧಾನಿ ಎಂಬ ಅಭೂತಪೂರ್ವ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ್ಲಾಲ್ ನೆಹರು ಅವರ ದಶಕಗಳ ಹಿಂದಿನ ದಾಖಲೆಯನ್ನು ಮೋದಿ ಅಧಿಕೃತವಾಗಿ ಹಿಂದಿಕ್ಕಿದ್ದಾರೆ. ಬುಧವಾರದ ಇಂದಿನ ದಿನಕ್ಕೆ ಪ್ರಧಾನಿ ಮೋದಿ ಅವರು ಪ್ರಧಾನಿ ಗದ್ದುಗೆಯಲ್ಲಿ ಸತತ 4,399 ದಿನಗಳ ಸುಸ್ಥಿರ ಆಡಳಿತವನ್ನು ಪೂರ್ಣಗೊಳಿಸಿದ್ದಾರೆ.
1952 ರಲ್ಲಿ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಪ್ರಧಾನಿಯಾಗಿ ಆಯ್ಕೆಯಾಗಿದ್ದ ಜವಾಹರ್ಲಾಲ್ ನೆಹರು ಅವರು, ಆ ವರ್ಷದ ಮೇ 13 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ತದನಂತರ ಮೇ 27, 1964 ರವರೆಗೆ (ಅವರು ನಿಧನರಾಗುವವರೆಗೆ) ಆ ಹುದ್ದೆಯಲ್ಲಿ ಸತತವಾಗಿ 4,398 ದಿನಗಳ ಕಾಲ ಚುನಾಯಿತ ಸರ್ಕಾರದ ಮುಖ್ಯಸ್ಥರಾಗಿ ನಿರಂತರ ಅಧಿಕಾರಾವಧಿಯನ್ನು ಪೂರೈಸಿದ್ದರು. (ಗಮನಿಸಿ: 1947 ರಿಂದ 1952 ರವರೆಗಿನ ನೆಹರು ಅವರ ಆರಂಭಿಕ ಅವಧಿಯು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿತ್ತೇ ಹೊರತು, ಆಗ ಸಾರ್ವತ್ರಿಕ ಚುನಾವಣೆಗಳು ನಡೆದಿರಲಿಲ್ಲ). ಇದೀಗ ಪ್ರಧಾನಿ ಮೋದಿ ಅವರು ಸತತ 4,399 ದಿನಗಳನ್ನು ಪೂರೈಸುವ ಮೂಲಕ ಚುನಾಯಿತ ಪ್ರಧಾನಿಯಾಗಿ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿದ ಮೊದಲ ನಾಯಕರಾಗಿದ್ದಾರೆ.
ಇದನ್ನೂ ಓದಿ;ಪ್ರಧಾನಿ ಮೋದಿ ನೀಡಿದ 10 ಮಂತ್ರಗಳ ಹಿಂದಿನ ರಹಸ್ಯವೇನು? ದೇಶಕ್ಕೆ ಎದುರಾಗಿದೆಯೇ ಆರ್ಥಿಕ ವಿಪತ್ತು?
2014 ರ ಮೇ 26 ರಂದು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ನರೇಂದ್ರ ಮೋದಿ ಅವರು, 2019 ಹಾಗೂ 2024 ರ ಸಾರ್ವತ್ರಿಕ ಚುನಾವಣೆಗಳಲ್ಲೂ ಭರ್ಜರಿ ಜನಾದೇಶ ಪಡೆದು ಸದ್ಯ ಮೂರನೇ ಅವಧಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ. ಈ ಐತಿಹಾಸಿಕ ಸಾಧನೆಯ ಹಿನ್ನೆಲೆಯಲ್ಲಿ ನವದೆಹಲಿ ಸೇರಿದಂತೆ ದೇಶದ ವಿವಿಧೆಡೆ ಬಿಜೆಪಿ ವತಿಯಿಂದ ಬೃಹತ್ ಬ್ಯಾನರ್‌ಗಳನ್ನು ಹಾಕಿ ಸಂಭ್ರಮಿಸಲಾಗುತ್ತಿದೆ. ಕೇಂದ್ರ ಸಚಿವರಾದ ಕಿರಣ್ ರಿಜಿಜು, ಸಿ.ಆರ್. ಪಾಟೀಲ್ ಹಾಗೂ ಕರ್ನಾಟಕದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಜಾಗತಿಕ ರಂಗದ ಪ್ರಮುಖ ನಾಯಕರು ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ 12 ವರ್ಷಗಳ ಅವಧಿಯು ಭಾರತವನ್ನು ‘ವಿಕಸಿತ ಭಾರತ’ದತ್ತ ಕೊಂಡೊಯ್ಯುವ ಸುವರ್ಣ ಕಾಲಘಟ್ಟ ಎಂದು ಗಣ್ಯರು ಬಣ್ಣಿಸಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


