ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಚಲನಚಿತ್ರ ಕಥೆಯನ್ನೂ ಮೀರಿಸುವಂತಹ ವಿಸ್ಮಯಕಾರಿ ಹಾಗೂ ಅತ್ಯಂತ ಭಾವನಾತ್ಮಕ ಘಟನೆಯೊಂದು ಬೆಳಕಿಗೆ ಬಂದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ, ಇದೀಗ ವಿಧಿಲೀಲೆಯಂತೆ ಮರಳಿ ತನ್ನ ಸ್ವಂತ ಮನೆಗೆ ಬಂದು ತಾಯಿಯನ್ನು ಸೇರಿದ್ದಾನೆ. ಧರ್ಮಸ್ಥಳದ ಅಶೋಕನಗರದ ನಿವಾಸಿಯಾಗಿದ್ದ ಸತೀಶ್ ಎಂಬಾತನೇ ಈಗ ‘ಸಲೀಂ’ ಆಗಿ ಮರಳಿ ಬಂದ ಅಪರೂಪದ ಘಟನೆಯೊಂದು ನಡೆದಿದೆ.
ಕಳೆದ 2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡವೊಂದನ್ನು ನೋಡಿ ಆಕರ್ಷಿತನಾಗಿದ್ದ 12 ವರ್ಷದ ಬಾಲಕ ಸತೀಶ್, ಯಾರಿಗೂ ತಿಳಿಸದೆ ಅವರ ಜೊತೆಯಲ್ಲೇ ಓಡಿಹೋಗಿದ್ದ. ಅಂದಿನಿಂದ ಆತ ಸರ್ಕಸ್ ತಂಡದೊಂದಿಗೆ ದೇಶದ ವಿವಿಧೆಡೆ ಸುತ್ತಾಡಿದ್ದಲ್ಲದೆ, ಕಳೆದ 26 ವರ್ಷಗಳಿಂದ ಮಹಾರಾಷ್ಟ್ರದಲ್ಲೇ ನೆಲೆ ನಿಂತು ಕೆಲಸ ಮಾಡಿಕೊಂಡಿದ್ದ. ನಿರಂತರ ದುಡಿಮೆ ಮತ್ತು ಸುದೀರ್ಘ ಕಾಲ ಹೊರರಾಜ್ಯದಲ್ಲಿದ್ದ ಕಾರಣ ಆತನಿಗೆ ತನ್ನ ಸ್ವಂತ ಊರು, ಹೆತ್ತವರು ಮತ್ತು ಮಾತೃಭಾಷೆಯಾದ ತುಳು ಹಾಗೂ ಕನ್ನಡ ಸಂಪೂರ್ಣವಾಗಿ ಮರೆತುಹೋಗಿತ್ತು.
ಮಹಾರಾಷ್ಟ್ರದಲ್ಲಿದ್ದ ಅವಧಿಯಲ್ಲಿ ಆತ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದ. ಅಲ್ಲಿಯೇ ತಾಲೀಮಾ ಎಂಬಾಕೆಯನ್ನು ವಿವಾಹವಾಗಿ, ಸದ್ಯ ಆತನಿಗೆ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ಆತನಿಗೆ ಕೇವಲ ಹಿಂದಿ ಭಾಷೆ ಮಾತ್ರ ಮಾತನಾಡಲು ಬರುತ್ತಿದ್ದು, ಕನ್ನಡವಾಗಲಿ ಅಥವಾ ತುಳುವಾಗಲಿ ನೆನಪಿಲ್ಲ.
ಜೂನ್ 9 ರಂದು ಸಲೀಂ (ಸತೀಶ್) ತನ್ನ ಮಹಾರಾಷ್ಟ್ರದ ಸ್ನೇಹಿತರ ತಂಡದೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ಈ ವೇಳೆ ಕಾಕತಾಳೀಯ ಎಂಬಂತೆ, ಈ ಹಿಂದೆ ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಬಂದಾಗ ಆತನಿಗೆ ಹಳೆಯ ಬಾಲ್ಯದ ನೆನಪುಗಳು ಹಠಾತ್ತಾಗಿ ಮರುಕಳಿಸಿವೆ. ‘ಇದೇ ನನ್ನ ಸ್ವಂತ ಊರು’ ಎಂಬ ಸತ್ಯದ ಅರಿವಾಗಿದೆ. ತನ್ನ ತಮ್ಮಂದಿರ ಹೆಸರುಗಳು ನೆನಪಿದ್ದ ಕಾರಣ, ಸ್ಥಳೀಯ ಅಂಗಡಿಯವರ ಬಳಿ ವಿಚಾರಿಸುತ್ತಾ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕಿಕೊಂಡು ಹೋಗಿದ್ದಾನೆ.
ಮನೆಯ ಬಾಗಿಲಿಗೆ ಬಂದು ನಿಂತು ಹಿಂದಿಯಲ್ಲಿ ಮಾತನಾಡುತ್ತಿದ್ದ ಹಿರಿಯ ಮಗನನ್ನು ಗುರುತಿಸಿದ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. 26 ವರ್ಷಗಳ ನಂತರ ಕಳೆದುಹೋದ ಮಗ ಮರಳಿ ಸಿಕ್ಕಿದ್ದಕ್ಕೆ ಇಡೀ ಕುಟುಂಬಸ್ಥರು ಮತ್ತು ಅಶೋಕನಗರದ ಗ್ರಾಮಸ್ಥರು ಅತ್ಯಂತ ಸಂತಸದಿಂದ ಆತನನ್ನು ಬರಮಾಡಿಕೊಂಡಿದ್ದಾರೆ. ಈ ಅಪರೂಪದ ಪುನರ್ಮಿಲನಕ್ಕೆ ಧರ್ಮಸ್ಥಳದ ಜನತೆ ಸಾಕ್ಷಿಯಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


