ಬೆಂಗಳೂರು: ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಅತ್ಯಾಚಾರ ಎಸಗಿದ ಗಂಭೀರ ಆರೋಪ ಎದುರಿಸುತ್ತಿರುವ ಪುತ್ತೂರಿನ ಮಾಜಿ ಬಿಜೆಪಿ ನಾಯಕನ ಪುತ್ರ, ಆರೋಪಿ ಕೃಷ್ಣ ಜೆ. ರಾವ್‌ನನ್ನು ಕರ್ನಾಟಕ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಸಂತ್ರಸ್ತೆ ಹಾಗೂ ಆಕೆಯ 10 ತಿಂಗಳ ಮಗುವಿನ ಜೀವನ ನಿರ್ವಹಣೆಗೆ ಹಣ ಠೇವಣಿ ಇಡಬೇಕೆಂಬ ಕೋರ್ಟ್‌ನ ಹಿಂದಿನ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರೋಪಿ ಕೃಷ್ಣ ಜೆ. ರಾವ್ ಹಾಗೂ ಅವರ ಪೋಷಕರು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಧೀಶರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೆಳವರ್ಗದ ಮಗು ಎಂಬ ಕಾರಣಕ್ಕೆ ಕೈಬಿಡ್ತೀರಾ?:
ವಿಚಾರಣೆ ವೇಳೆ ಗರಂ ಆದ ನ್ಯಾಯಮೂರ್ತಿಗಳು, “ಆ ನಿರಪರಾಧಿ ಮಗು ಕೆಳ ವರ್ಗದ ಕುಟುಂಬದಲ್ಲಿ ಜನಿಸಿದೆ ಎಂಬ ಒಂದೇ ಕಾರಣಕ್ಕೆ ಅದನ್ನು ಹಾಗೇ ಕೈಬಿಡುತ್ತಿದ್ದೀರಾ? ಅದನ್ನು ನ್ಯಾಯಾಲಯ ಎಂದಿಗೂ ಒಪ್ಪುವುದಿಲ್ಲ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಂತ್ರಸ್ತೆ ಮತ್ತು ಆಕೆಯ ಮಗುವಿನ ತುರ್ತು ನಿರ್ವಹಣೆಗಾಗಿ ಒಂದು ವಾರದೊಳಗೆ 75,000 ರೂ. ಹಣವನ್ನು ಠೇವಣಿ ಇಡಲು ಏಪ್ರಿಲ್ 26ರಂದೇ ಮಧ್ಯಂತರ ಆದೇಶ ನೀಡಲಾಗಿತ್ತು ಎಂಬುದನ್ನು ಹೈಕೋರ್ಟ್ ನೆನಪಿಸಿದೆ.
ಇದನ್ನೂ ಓದಿ: ಪುತ್ತೂರು: ಯುವತಿಗೆ ವಂಚಿಸಿದ ಪ್ರಕರಣ; ಮಾಜಿ ಬಿಜೆಪಿ ಮುಖಂಡನ ಪುತ್ರನಿಗೆ ಹೈಕೋರ್ಟ್‌ನಿಂದ ಬಿಗ್ ಶಾಕ್!
ತಂದೆ ಇದ್ದಾರಲ್ಲ, ಹಣ ಕೊಡಲು ಸಾಧ್ಯವಿಲ್ಲವೇ?:
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ. ಹೆಗ್ಡೆ, “ಆರೋಪಿ ಕೃಷ್ಣ ಜೆ. ರಾವ್ ಇನ್ನೂ ವಿದ್ಯಾರ್ಥಿಯಾಗಿದ್ದಾನೆ. ಹೀಗಾಗಿ ನ್ಯಾಯಾಲಯ ವಿಧಿಸಿದ್ದ ಆರ್ಥಿಕ ಷರತ್ತನ್ನು ತಕ್ಷಣ ಪಾಲಿಸಲು ಸಾಧ್ಯವಾಗಿಲ್ಲ” ಎಂದು ಕೋರ್ಟ್‌ಗೆ ತಿಳಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, “75,000 ರೂ. ಕೊಡಲು ಸಾಧ್ಯವಾಗುತ್ತಿಲ್ಲವೇ? ನಿಮ್ಮ ತಂದೆ ಇದ್ದಾರಲ್ಲ. ತಕ್ಷಣ ಹಣ ಪಾವತಿಸದಿದ್ದರೆ ನಿಮ್ಮ ಅರ್ಜಿಗಳನ್ನು ವಜಾಗೊಳಿಸುತ್ತೇನೆ. ನಿಮ್ಮ ಕೃತ್ಯಗಳಿಂದ ಒಂದು ಮಗು ಜನಿಸಿದೆ, ಅದರ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲವೇ?” ಎಂದು ಖಾರವಾಗಿ ಪ್ರಶ್ನಿಸಿದರು.
ಸಂತ್ರಸ್ತೆಯ ಪರ ವಕೀಲರು ಕೋರ್ಟ್ ಗಮನಕ್ಕೆ ತಂದು, ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದರೂ ಆರೋಪಿ ಹಣ ವರ್ಗಾಯಿಸಿಲ್ಲ ಮತ್ತು ಮೇ 5ರಂದು ಠೇವಣಿ ಇಟ್ಟಿದ್ದ ಮೊದಲ ಕಂತಿನ ಹಣದ ಮಾಹಿತಿಯನ್ನು ಸಂತ್ರಸ್ತೆಗೆ ತಿಳಿಸಿಲ್ಲ ಎಂದು ಹೇಳಿದರು. ಈ ವೇಳೆ ಜಡ್ಜ್, “ಪರಿಸ್ಥಿತಿಯ ಗಂಭೀರತೆಯನ್ನು ಮೊದಲು ಅರ್ಥಮಾಡಿಕೊಳ್ಳಿ. ಇದು ಪರಸ್ಪರ ಸಮ್ಮತಿಯ ಸಂಬಂಧವಾಗಿದ್ದರೆ ಸಮಸ್ಯೆ ಇರಲಿಲ್ಲ. ಆದರೆ ಆ ಸಂಬಂಧದಿಂದ ಒಂದು ನಿರಪರಾಧಿ ಮಗು ಜನಿಸಿದೆ. ಈಗ ಆ ಮಗುವನ್ನು ಬದುಕಲು ಯಾವುದೇ ಆಧಾರವಿಲ್ಲದ ಸ್ಥಿತಿಯಲ್ಲಿ ಬಿಟ್ಟಿದ್ದೀರಿ. ನೀವು ಜವಾಬ್ದಾರಿಯಿಂದ ಹೇಗೆ ಕೈತೊಳೆದುಕೊಳ್ಳುತ್ತೀರಿ?” ಎಂದರು.
ಇದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 69ರ ಅಡಿಯಲ್ಲಿ ‘ಮದುವೆಯ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸಿದ’ ಅತ್ಯಂತ ಸ್ಪಷ್ಟವಾದ ಪ್ರಕರಣವಾಗಿದೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ಎರಡೂ ಅರ್ಜಿಗಳನ್ನು ವಜಾಗೊಳಿಸಲಾಗುವುದು ಮತ್ತು ಯಾವುದೇ ಅರ್ಜಿಯನ್ನು ಹಿಂಪಡೆಯಲು ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳು ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


