ಪೆಟ್ರೋಲ್ ಬಂಕ್‌ಗಳಲ್ಲಿ ಇನ್ಮುಂದೆ ದಿನಕ್ಕೆ 200 ಲೀಟರ್‌ಗಿಂತ ಹೆಚ್ಚು ಡೀಸೆಲ್ ಸಿಗಲ್ಲ: ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿ!

ದೆಹಲಿ: ದೇಶದ ಪೆಟ್ರೋಲ್ ಬಂಕ್‌ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಕಂಡುಬಂದಿರುವ ಅಸಹಜ ಮತ್ತು ದಿಢೀರ್ ಬೇಡಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕೈಗಾರಿಕಾ ಹಾಗೂ ವಾಣಿಜ್ಯ ಬಳಕೆಯ ಗ್ರಾಹಕರು ಇನ್ಮುಂದೆ ಸಾಮಾನ್ಯ ಪೆಟ್ರೋಲ್ ಬಂಕ್‌ಗಳಿಂದ (Retail Outlets) ಇಂಧನ ಖರೀದಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅವರು ತಮ್ಮ ನಿಗದಿತ ಬಲ್ಕ್ ಸಪ್ಲೈ ಚಾನೆಲ್‌ಗಳ (Dedicated Supply Channels) ಮೂಲಕವೇ ಇಂಧನವನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ.

ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೊರಡಿಸಿರುವ ಹೊಸ ನಿಯಮಾವಳಿಗಳ ಪ್ರಕಾರ, ಯಾವುದೇ ಸಾಮಾನ್ಯ ಪೆಟ್ರೋಲ್ ಬಂಕ್‌ಗಳು ಒಬ್ಬ ಗ್ರಾಹಕನಿಗೆ ಅಥವಾ ಒಂದು ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್‌ಗಿಂತ ಹೆಚ್ಚು ಡೀಸೆಲ್ ವಿತರಿಸುವಂತಿಲ್ಲ. ಅಷ್ಟೇ ಅಲ್ಲದೆ, ಹೀಗೆ ಖರೀದಿಸಿದ ಡೀಸೆಲ್ ಅನ್ನು ಸಾರ್ವಜನಿಕವಾಗಿ ಅಥವಾ ಇತರೆಡೆ ಮರುಮಾರಾಟ (Resale) ಮಾಡುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹೊಸ ನಿಯಮವು ಮುಂದಿನ 90 ದಿನಗಳವರೆಗೆ ಜಾರಿಯಲ್ಲಿರಲಿದ್ದು, ಅಗತ್ಯಬಿದ್ದರೆ ಅವಧಿಗೂ ಮುನ್ನವೇ ಹಿಂಪಡೆಯುವ ಅಥವಾ ವಿಸ್ತರಿಸುವ ಅಧಿಕಾರವನ್ನು ಸರ್ಕಾರ ಕಾಯ್ದಿರಿಸಿದೆ.

ಇದನ್ನೂ ಓದಿ: ಇಂಡಿಗೋ ಸಂಸ್ಥೆಗೆ ಡಬಲ್ ಶಾಕ್!: ಇಂಧನ ದರ ಏರಿಕೆ ನಡುವೆ ಹೊಸ ವಿಮಾನಗಳ ವಿತರಣೆಯೂ ವಿಳಂಬ; ಹೂಡಿಕೆದಾರರಲ್ಲಿ ಆತಂಕ

ನಿಯಮ ಜಾರಿಗೆ ಅಸಲಿ ಕಾರಣವೇನು?:

ಬಲ್ಕ್ (ಸಗಟು) ಮಾರುಕಟ್ಟೆಯಲ್ಲಿ ಡೀಸೆಲ್ ದರ ಹಾಗೂ ಸಾಮಾನ್ಯ ಪೆಟ್ರೋಲ್ ಬಂಕ್‌ಗಳ ರೀಟೇಲ್ ದರಗಳ ನಡುವೆ ಭಾರಿ ವ್ಯತ್ಯಾಸವಿದೆ (ಬಲ್ಕ್ ದರ ರೀಟೇಲ್‌ಗಿಂತ ಸುಮಾರು 40 ರೂ. ಹೆಚ್ಚಾಗಿದೆ). ಈ ದರ ವ್ಯತ್ಯಾಸದ ಲಾಭ ಪಡೆಯಲು ದೊಡ್ಡ ದೊಡ್ಡ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ಮತ್ತು ಸಾಂಸ್ಥಿಕ ಗ್ರಾಹಕರು ತಮ್ಮ ನಿಗದಿತ ಪಂಪ್‌ಗಳನ್ನು ಬಿಟ್ಟು, ಸಾಮಾನ್ಯ ಸಾರ್ವಜನಿಕರು ಇಂಧನ ತುಂಬಿಸುವ ಸರ್ಕಾರಿ ತೈಲ ಕಂಪನಿಗಳ ರೀಟೇಲ್ ಪೆಟ್ರೋಲ್ ಬಂಕ್‌ಗಳ ಕಡೆಗೆ ಮುಖ ಮಾಡಿದ್ದಾರೆ. ಇದರಿಂದಾಗಿ ಕೆಲವು ಪ್ರದೇಶಗಳ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನದ ಕೊರತೆ ಎದುರಾಗುವ ಭೀತಿ ಮೂಡಿದೆ.

ಈ ಕುರಿತು ಮಾಹಿತಿ ನೀಡಿರುವ ಸರ್ಕಾರ, “ದೊಡ್ಡ ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರು ರೀಟೇಲ್ ಬಂಕ್‌ಗಳ ಕಡೆಗೆ ವರ್ಗಾವಣೆಗೊಂಡಿದ್ದರಿಂದ ಪೆಟ್ರೋಲ್ ಬಂಕ್‌ಗಳಲ್ಲಿ ‘ಅಸಮಾನ ಮತ್ತು ಅಸಾಧಾರಣ ಬೇಡಿಕೆ’ ಸೃಷ್ಟಿಯಾಗಿದೆ. ಸಾಮಾನ್ಯ ಗ್ರಾಹಕರು, ರೈತರು ಹಾಗೂ ಸಾರಿಗೆ ವ್ಯವಸ್ಥೆಗೆ ಸಿಗಬೇಕಾದ ಇಂಧನವು ದುರುಪಯೋಗವಾಗುವುದನ್ನು ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಮರುಮಾರಾಟವಾಗುವುದನ್ನು ತಡೆಯಲು ಈ ತಡೆಬೆಲೆಯನ್ನು ಹಾಕಲಾಗಿದೆ” ಎಂದು ಸ್ಪಷ್ಟಪಡಿಸಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು