ದೋಹಾ: ಭಾರತದ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಭರ್ಜರಿಯಾಗಿ ಮೈದಾನಕ್ಕೆ ಮರಳಿದ್ದಾರೆ. ಖಾತರ್‌ನ ದೋಹಾದಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮೂಲಕ ಕಂಬ್ಯಾಕ್ ಮಾಡಿರುವ ಅವರು, ಬರೋಬ್ಬರಿ 85.69 ಮೀಟರ್ ದೂರ ಭರ್ಜಿ ಎಸೆಯುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದಾರೆ.
ಬೆನ್ನು ನೋವಿನ ಸಮಸ್ಯೆಯಿಂದಾಗಿ ಕಳೆದ ಸುಮಾರು 9 ತಿಂಗಳುಗಳಿಂದ ಸ್ಪರ್ಧಾತ್ಮಕ ಕ್ರೀಡೆಯಿಂದ ದೂರವಿದ್ದ ನೀರಜ್ ಚೋಪ್ರಾ ಅವರಿಗೆ ದೋಹಾ ಡೈಮಂಡ್ ಲೀಗ್‌ನಲ್ಲಿ ಆರಂಭದಲ್ಲಿ ನಿರೀಕ್ಷಿತ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಇದಾಗ್ಯೂ, ಹಠ ಬಿಡದ ಅವರು ತಮ್ಮ ಮೂರನೇ ಪ್ರಯತ್ನದಲ್ಲಿ 85.69 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನದೊಂದಿಗೆ ಅವರು ಲೀಗ್‌ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ, ಈ ಪುನರಾಗಮನದ ಪ್ರದರ್ಶನವು ಅವರಿಗೆ ಮುಂಬರುವ ದೊಡ್ಡ ಕ್ರೀಡಾಕೂಟಕ್ಕೆ ಹಾದಿ ಸುಗಮ ಮಾಡಿಕೊಟ್ಟಿದೆ.
ಈ ಭರ್ಜರಿ ಪ್ರದರ್ಶನದ ಫಲವಾಗಿ ನೀರಜ್ ಚೋಪ್ರಾ ಅವರು 2026ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅಧಿಕೃತವಾಗಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಮುಂಬರುವ ಗ್ಲ್ಯಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಲು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) 82.61 ಮೀಟರ್ ಅರ್ಹತಾ ಮಾನದಂಡವನ್ನು ನಿಗದಿಪಡಿಸಿತ್ತು.
ನಿಗದಿತ ಗುರಿಯನ್ನು ಸುಲಭವಾಗಿ ತಲುಪಿದ ನೀರಜ್ ಚೋಪ್ರಾ, ತಮ್ಮ 2ನೇ ಎಸೆತದಲ್ಲೇ ಬರೋಬ್ಬರಿ 82.77 ಮೀಟರ್ ದೂರಕ್ಕೆ ಭರ್ಜಿ ಎಸೆದು ಅರ್ಹತಾ ಮಾನದಂಡವನ್ನು ದಾಟಿದ್ದರು. ಇನ್ನು 3ನೇ ಪ್ರಯತ್ನದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿ 85.69 ಮೀಟರ್ ದೂರ ದಾಖಲಿಸುವ ಮೂಲಕ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪರ ಸ್ಪರ್ಧಿಸುವುದನ್ನು ಖಚಿತಪಡಿಸಿಕೊಂಡರು. ಗಾಯದ ನಡುವೆಯೂ ನೀರಜ್ ನೀಡಿರುವ ಈ ಪ್ರದರ್ಶನವು ಮುಂಬರುವ ದಿನಗಳಲ್ಲಿ ಅವರು ಮತ್ತಷ್ಟು ಲಯಕ್ಕೆ ಮರಳುವ ವಿಶ್ವಾಸ ಮೂಡಿಸಿದೆ.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


