“ಪಪ್ಪಾ ನನ್ನ ಕಾಪಾಡು”: ದೆಹಲಿಯಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದ ಕ್ಯಾಬ್ ಚಾಲಕ

ದೆಹಲಿ: “ಪಪ್ಪಾ ನನ್ನ ಕಾಪಾಡು…” ಇದು ದೆಹಲಿಯ ಫುಟ್‌ಪಾತ್‌ನಲ್ಲಿ ಹೆತ್ತವರ ಪಕ್ಕದಲ್ಲೇ ಮಲಗಿದ್ದಾಗ ಕ್ಯಾಬ್ ಚಾಲಕನಿಂದ ಅಪಹರಣಕ್ಕೊಳಗಾದ 10 ವರ್ಷದ ಮುಗ್ಧ ಬಾಲಕಿಯ ಕೊನೆಯ ಆರ್ತನಾದ! ಮಗಳ ಚೀರಾಟ ಕೇಳಿ ತಂದೆ ಎದ್ದು ಬಿಳಿ ಬಣ್ಣದ ಕಾರಿನ ಹಿಂದೆ ಪ್ರಾಣಭಯದಿಂದ ಓಡಿದರೂ, ಅಷ್ಟರಲ್ಲೇ ಆ ಕಾಮುಕ ಮಗುವಿನೊಂದಿಗೆ ಪರಾರಿಯಾಗಿದ್ದ. ದೆಹಲಿಯನ್ನು ಮತ್ತೊಮ್ಮೆ ಬೆಚ್ಚಿಬೀಳಿಸಿರುವ ಈ ಭೀಕರ ಘಟನೆಯಲ್ಲಿ ಆ್ಯಪ್ ಆಧಾರಿತ ಕ್ಯಾಬ್ ಚಾಲಕನೊಬ್ಬ ಮುಗ್ಧ ಮಗುವನ್ನು ಅಪಹರಿಸಿ, ಅತ್ಯಾಚಾರ ನಡೆಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸೋಮವಾರ ತಡರಾತ್ರಿ ದಕ್ಷಿಣ ದೆಹಲಿಯ ಫುಟ್‌ಪಾತ್‌ನಲ್ಲಿ ತಂದೆ-ತಾಯಿ ಹಾಗೂ ಮೂವರು ಒಡಹುಟ್ಟಿದವರ ಜೊತೆ 10 ವರ್ಷದ ಬಾಲಕಿ ನಿದ್ದೆಗೆ ಜಾರಿದ್ದಳು. ಈ ವೇಳೆ ಆ್ಯಪ್ ಆಧಾರಿತ ಕ್ಯಾಬ್ ಚಾಲಕ, ಬಿಹಾರ ಮೂಲದ ಬಬ್ಲು ಎಂಬಾತ ತೀವ್ರವಾಗಿ ಮದ್ಯಪಾನ ಮಾಡಿ ಗ್ರಾಹಕರೊಬ್ಬರ ಬುಕ್ಕಿಂಗ್‌ಗಾಗಿ ಕಾಯುತ್ತಿದ್ದಾಗ ಫುಟ್‌ಪಾತ್‌ನಲ್ಲಿ ಮಲಗಿದ್ದ ಮಗು ಆತನ ಕಣ್ಣಿಗೆ ಬಿದ್ದಿದೆ. ಮುಂಜಾನೆ 5 ಗಂಟೆಯ ಸುಮಾರಿಗೆ ಯಾರೂ ಇಲ್ಲದ್ದನ್ನು ಗಮನಿಸಿ ಮಗುವನ್ನು ಎತ್ತಿಕೊಂಡು ಕಾರಿಗೆ ಹಾಕಿಕೊಂಡಿದ್ದಾನೆ. ಮಗಳ ಕಿರುಚಾಟ ಕೇಳಿ ತಂದೆ ಎಚ್ಚರಗೊಂಡು ಕಾರಿನ ಹಿಂದೆ ಓಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.

Advertisement

4 ಗಂಟೆಗಳ ಕಾಲ ನಡೆದ ರೋಚಕ ಕಾರ್ಯಾಚರಣೆ; ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?:
ಘಟನೆ ನಡೆದ ತಕ್ಷಣ ತಂದೆ ಪೊಲೀಸ್ ನಿಯಂತ್ರಣ ಕೊಠಡಿಗೆ (PCR) ಕರೆ ಮಾಡಿ ಮಾಹಿತಿ ನೀಡಿದ್ದಾರೆ. ದೆಹಲಿ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಆರಂಭಿಸಿದರು. ಬಿಳಿ ಬಣ್ಣದ ಹ್ಯಾಚ್‌ಬ್ಯಾಕ್ ಕಾರು ಮುಂಜಾನೆ 4 ಗಂಟೆಗೆ ಬಂದು ಒಂದು ಗಂಟೆ ಕಾಲ ಅಲ್ಲೇ ನಿಂತಿರುವುದು ಪತ್ತೆಯಾಯಿತು. ಆದರೆ ಕಾರಿನ ನಂಬರ್ ಪ್ಲೇಟ್ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ತಕ್ಷಣ ಪೊಲೀಸರು ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪನಿಗಳಿಂದ ಆ ನಿರ್ದಿಷ್ಟ ಸಮಯದ ಟ್ರಿಪ್ ವಿವರಗಳನ್ನು ಪಡೆದರು. ಕೊನೆಗೆ ಜಿಪಿಎಸ್ (GPS) ಮತ್ತು ಮೊಬೈಲ್ ಲೊಕೇಶನ್ ಆಧರಿಸಿ ಪಶ್ಚಿಮ ದೆಹಲಿಯ ವಿಕಾಸ್‌ಪುರಿ ಪ್ರದೇಶದಲ್ಲಿ ಕಾರನ್ನು ಸುತ್ತುವರೆದು ಕೇವಲ 4 ಗಂಟೆಗಳಲ್ಲಿ ಆರೋಪಿ ಬಬ್ಲುವನ್ನು ಬಂಧಿಸಿದರು.

ಪೊಲೀಸ್ ವಿಚಾರಣೆಯ ವೇಳೆ ಆರೋಪಿ ಬಬ್ಲು ತನ್ನ ಭೀಕರ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಮಗುವನ್ನು ಅಪಹರಿಸಿದ ನಂತರ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಗುರುಗ್ರಾಮ್-ಫರಿದಾಬಾದ್ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾಗಿ ತಿಳಿಸಿದ್ದಾನೆ. ಅಲ್ಲಿ ಕಾರು ನಿಲ್ಲಿಸಿ, ಮಗುವನ್ನು ದಟ್ಟವಾದ ಕಾಡಿನೊಳಗೆ ಎಳೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮಗು ಯಾರಿಗಾದರೂ ಹೇಳಬಹುದೆಂಬ ಭಯದಿಂದ ಆಕೆಯ ಕುತ್ತಿಗೆಗೆ ಸ್ಕಾರ್ಫ್ (Scarf) ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಶವವನ್ನು ಅಲ್ಲೇ ಎಸೆದು ಪರಾರಿಯಾಗಿದ್ದ.

ಇದನ್ನೂ ಓದಿ; ಲಕ್ನೋದ ಕೋಚಿಂಗ್ ಸೆಂಟರ್‌ನಲ್ಲಿ ಭೀಕರ ಅಗ್ನಿ ಅವಘಡ; 15 ವಿದ್ಯಾರ್ಥಿಗಳು ಸಜೀವ ದಹನ, ಪ್ರಾಣ ಉಳಿಸಿಕೊಳ್ಳಲು ಮೊದಲ ಮಹಡಿಯಿಂದ ಜಿಗಿದ ಯುವಕರು!

ಅತ್ಯಂತ ಆಘಾತಕಾರಿ ವಿಷಯವೆಂದರೆ, ಮಗುವನ್ನು ಇಷ್ಟು ಕ್ರೂರವಾಗಿ ಕೊಂದ ನಂತರವೂ ಆತನಿಗೆ ಯಾವುದೇ ಪಶ್ಚಾತ್ತಾಪವಿರಲಿಲ್ಲ. ಕೊಲೆ ಮಾಡಿದ ಕೆಲವೇ ಗಂಟೆಗಳಲ್ಲಿ ಆತ ಗುರುಗ್ರಾಮ್‌ನಿಂದ ವಿಕಾಸ್‌ಪುರಿಗೆ ಮತ್ತೊಬ್ಬ ಗ್ರಾಹಕರನ್ನು ಕಾರಿನಲ್ಲಿ ಪಿಕ್ ಅಪ್ ಮಾಡಿಕೊಂಡು ಡ್ರಾಪ್ ಮಾಡಿದ್ದ. ತಾನು ಮಾಡಿದ ಘೋರ ಕೃತ್ಯದ ಯಾವುದೇ ಲಕ್ಷಣ ಮುಖದಲ್ಲಿ ತೋರದೆ ಸಾಮಾನ್ಯನಂತೆ ಬ್ಯುಸಿನೆಸ್ ಮುಂದುವರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಬಬ್ಲುಗೆ ಬಿಹಾರದಲ್ಲಿ ಪತ್ನಿ ಮತ್ತು ಮಕ್ಕಳಿದ್ದು, ಆತನ ವಿರುದ್ಧ ಈಗಾಗಲೇ ಬಿಹಾರದಲ್ಲಿ 5 ಹಲ್ಲೆ ಪ್ರಕರಣಗಳು ದಾಖಲಾಗಿವೆ.

ಮಂಗಳವಾರ ಪೊಲೀಸರು ಮಹಜರು ನಡೆಸಲು ಮತ್ತು ಮಗುವಿನ ಶವವನ್ನು ಗುರುತಿಸಲು ಆರೋಪಿ ಬಬ್ಲುವನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ಯುತ್ತಿದ್ದರು. ಈ ವೇಳೆ ಆತ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಸದ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಂತಹ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗೆ ಚಾಲಕನ ಕೆಲಸ ನೀಡಿದ್ದು ಹೇಗೆ ಎಂದು ದೆಹಲಿ ಪೊಲೀಸರು ಈಗ ಆ್ಯಪ್ ಆಧಾರಿತ ಟ್ಯಾಕ್ಸಿ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *