ಮೇಜರ್ ಸೋಮನಾಥ ಶರ್ಮ ಅವರ ಪ್ರಾಣಾರ್ಪಣೆಯಿಂದಲೇ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿದೆ: ರಾಕೇಶ್ ಕಮ್ಮಜೆ

ಪುತ್ತೂರು: “ಭಾರತದ ಮೊದಲ ಪರಮ ವೀರ ಚಕ್ರ ಪುರಸ್ಕೃತ ಸೇನಾನಿ ಮೇಜರ್ ಸೋಮನಾಥ ಶರ್ಮ ಅವರು 1947ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ತೋರಿದ ಅಪ್ರತಿಮ ಸಾಹಸ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಅಂದು ಅವರು ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡಿ ತಮ್ಮ ಪ್ರಾಣಾರ್ಪಣೆ ಮಾಡಿದ್ದರಿಂದಲೇ ಇಂದು ಭಾರತದ ಕಿರೀಟ ಪ್ರಾಯವಾಗಿರುವ ಕಾಶ್ಮೀರ ನಮ್ಮೊಂದಿಗೆ ಉಳಿದುಕೊಳ್ಳಲು ಸಾಧ್ಯವಾಗಿದೆ” ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ ಹೇಳಿದ್ದಾರೆ.

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ಭಾರತೀಯ ಸೇನೆ’ಯ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.

Advertisement

700 ಶತ್ರು ಸೈನಿಕರ ವಿರುದ್ಧ 6 ಗಂಟೆಗಳ ಕಾಲ ಭೀಕರ ಹೋರಾಟ!

1947ರ ಆ ಭೀಕರ ಯುದ್ಧದ ಸನ್ನಿವೇಶವನ್ನು ಸ್ಮರಿಸಿದ ರಾಕೇಶ್ ಕಮ್ಮಜೆ, “ಮೇಜರ್ ಸೋಮನಾಥ ಶರ್ಮಾರವರು ಕೇವಲ 90 ಮಂದಿ ಭಾರತೀಯ ಸೈನಿಕರ ನಾಯಕತ್ವ ವಹಿಸಿ, ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದ 700 ಪಾಕಿಸ್ತಾನಿ ಸೈನಿಕರ ವಿರುದ್ಧ ಸುಮಾರು ಆರು ಗಂಟೆಗಳ ಕಾಲ ಸತತವಾಗಿ ಹೋರಾಡಿದರು. ಭಾರತೀಯ ಸೇನೆಯ ಹೆಚ್ಚುವರಿ ಪಡೆಗಳು ಅಲ್ಲಿಗೆ ಜಮಾವಣೆಯಾಗುವವರೆಗೂ ಪಾಕಿಸ್ತಾನಿಯರು ಒಂದಿಂಚೂ ಮುಂದೆ ಬರದಂತೆ ತಡೆದು ನಿಲ್ಲಿಸಿ, ಗಡಿ ಕಾಯ್ದು ವೀರಮರಣ ಹೊಂದಿದರು” ಎಂದು ಅವರ ಶೌರ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

“1947ರಿಂದ 2026ರ ವರೆಗೆ ದೇಶದಲ್ಲಿ ಕೇವಲ 21 ಯೋಧರಿಗೆ ಮಾತ್ರವೇ ಅತ್ಯುನ್ನತ ‘ಪರಮ ವೀರ ಚಕ್ರ’ ಪ್ರಶಸ್ತಿ ಲಭಿಸಿದೆ. ಅದರಲ್ಲಿ 14 ಯೋಧರಿಗೆ ಮರಣೋತ್ತರವಾಗಿ ಸಂದಿದ್ದರೆ, ಬದುಕುಳಿದ 7 ಯೋಧರಿಗೆ ಯುದ್ಧದ ನಂತರ ನೀಡಲಾಗಿದೆ. ಆ ಏಳರಲ್ಲಿ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಸಂಜಯ್ ಕುಮಾರ್ ಹಾಗೂ ಕ್ಯಾಪ್ಟನ್ ಬಾಣಾಸಿಂಗ್ ಈಗಲೂ ನಮ್ಮ ನಡುವೆ ಇದ್ದಾರೆ. ಇವರಲ್ಲಿ ಯೋಗೇಂದ್ರ ಸಿಂಗ್ ಯಾದವ್ ಹಾಗೂ ಸಂಜಯ್ ಕುಮಾರ್ ಅವರು ಈ ಹಿಂದೆ ಅಂಬಿಕಾ ಸಂಸ್ಥೆಯ ಅಂಗಳಕ್ಕೆ ಆಗಮಿಸಿದ್ದು ನಮ್ಮ ಸಂಸ್ಥೆಯ ಪುಣ್ಯ ವಿಶೇಷ” ಎಂದು ಅವರು ಹೆಮ್ಮೆಯಿಂದ ಸ್ಮರಿಸಿದರು.

ಇದನ್ನೂ ಓದಿ: ಜಿಲ್ಲಾ ಅತ್ಯುತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿಗೆ ಮಂಚಿ-ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಆಯ್ಕೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, “ಮಿಲಿಟರಿ ಸಮವಸ್ತ್ರ ಎನ್ನುವುದು ನಮ್ಮ ದೇಶದ ಹೆಮ್ಮೆಯ ಪ್ರತೀಕ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ಶಿಸ್ತು ಮೂಡಿಸುವ ಉದ್ದೇಶದಿಂದಲೇ ಅಂಬಿಕಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಮಿಲಿಟರಿ ಮಾದರಿಯ ಸಮವಸ್ತ್ರವನ್ನು ಒದಗಿಸಿಕೊಡಲಾಗಿದೆ. ಗಡಿ ಕಾಯುವ ಸೈನಿಕರಿಗೆ ನೀಡುವಷ್ಟೇ ಗೌರವವನ್ನು ವಿದ್ಯಾರ್ಥಿಗಳು ಈ ಸಮವಸ್ತ್ರಕ್ಕೂ ನೀಡಬೇಕು” ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಅಂಬಿಕಾ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಪ್ರಾಂಶುಪಾಲೆ ಮಾಲತಿ.ಡಿ, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಹಾಗೂ ಸಮಾಜ ವಿಜ್ಞಾನ ಶಿಕ್ಷಕರಾದ ರಮೇಶ್ ಮತ್ತು ದೀಪ್ತಿ ಉಪಸ್ಥಿತರಿದ್ದರು. ಶಾಲಾ ನಾಯಕ ಸಾತ್ವಿಕ್.ಜಿ ಹಾಗೂ ಶಾಲಾ ನಾಯಕಿ ವಂಶಿಕಾ ಬಿ.ರೈ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *