ಪುಣೆ: ಪ್ರೀತಿ ಮಾಡುವುದು ಒಬ್ಬರನ್ನ, ಮನೆಯವರ ಒತ್ತಡಕ್ಕೆ ಮಣಿದು ಮದುವೆಯಾಗುವುದು ಇನ್ನೊಬ್ಬರನ್ನ… ಕೊನೆಗೆ ಈ ತ್ರಿಕೋನ ಪ್ರೇಮಕಥೆಗಳು ಅತ್ಯಂತ ಕ್ರೂರವಾಗಿ ‘ಹನಿಮೂನ್ ಮರ್ಡರ್’ (Honeymoon Murder) ರೂಪದಲ್ಲಿ ಕೊನೆಗೊಳ್ಳುತ್ತಿರುವ ಕಹಿ ಸತ್ಯ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಎಂಬ ಅಮಾಯಕ ಯುವಕನ ಭೀಕರ ಹತ್ಯೆ ಪ್ರಕರಣ.
ಇನ್ನೊಬ್ಬನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಸಿಯಾ ಗೋಯಲ್ ಎಂಬ ಯುವತಿ, ತನಗೆ ಈ ಮದುವೆ ಇಷ್ಟವಿಲ್ಲ ಎಂದು ನೇರವಾಗಿ ನಿರಾಕರಿಸಬಹುದಿತ್ತು. ಅದನ್ನು ಬಿಟ್ಟು ಮದುವೆಯಾದ ಬೆನ್ನಲ್ಲೇ ಅಮಾಯಕ ಕೇತನ್‌ನನ್ನು ಕೊಲೆ ಮಾಡುವ ಹಂತಕ್ಕೆ ಯಾಕೆ ಹೋದಳು? ಇಂತಹ ಕ್ರೂರ ನಿರ್ಧಾರಗಳ ಹಿಂದಿರುವ ಮಾನಸಿಕ ಸ್ಥಿತಿ ಏನು ಎಂಬ ನಾನಾ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿದ್ದು, ಇದಕ್ಕೆ ಮಾನಸಿಕ ತಜ್ಞರು ಆಘಾತಕಾರಿ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.

ಹತ್ಯೆ ಹಿಂದಿರುವ ಅಸಲಿ ರಹಸ್ಯವೇನು?:
ಪೊಲೀಸ್ ತನಿಖೆಯ ಪ್ರಕಾರ, ಆರೋಪಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಎಂಬ ಯುವಕ ದೀರ್ಘಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸಿಯಾಳ ಮನೆಯವರು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಕೇತನ್ ಅಗರ್ವಾಲ್ ಜೊತೆ ಮದುವೆ ನಿಶ್ಚಯಿಸಿ, ಮದುವೆಯನ್ನೂ ಮಾಡಿಸಿದ್ದರು. ಈ ಮದುವೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಸಿಯಾ, ತನ್ನ ಪ್ರೇಮಿ ಚೇತನ್ ಜೊತೆ ಸೇರಿ ಪತಿ ಕೇತನ್‌ನನ್ನು ದಾರಿಯಿಂದ ಮುಳ್ಳಿನಂತೆ ತೆಗೆದುಹಾಕಲು ಸ್ಕೆಚ್ ಹಾಕಿ, ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾಳೆ.
ಅತಿಯಾದ ಗೀಳು ಮತ್ತು ಕೌಟುಂಬಿಕ ಒತ್ತಡದ ಸೈಕಾಲಜಿ:
ಮದುವೆ ನಿರಾಕರಿಸಿ ಪ್ರೇಮಿಯನ್ನೇ ಮದುವೆಯಾಗುವ ಬದಲು ಅಮಾಯಕನನ್ನು ಹತ್ಯೆ ಮಾಡುವ ಕ್ರೂರ ಹಾದಿಯನ್ನು ಇಂದಿನ ಯುವ ಪೀಳಿಗೆ ಯಾಕೆ ಆರಿಸಿಕೊಳ್ಳುತ್ತಿದೆ ಎಂಬ ಪ್ರಶ್ನೆಗೆ ಪ್ರಸಿದ್ಧ ಮನಶ್ಶಾಸ್ತ್ರಜ್ಞರಾದ ಡಾ. ಬಿಂದಾ ಸಿಂಗ್ ಮಹತ್ವದ ಉತ್ತರ ನೀಡಿದ್ದಾರೆ:
ಭಾವನಾತ್ಮಕ ಉಸಿರುಗಟ್ಟುವಿಕೆ: ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣುಮಕ್ಕಳಿಗೆ ತಮ್ಮ ನಿರ್ಧಾರಗಳನ್ನು ಮುಕ್ತವಾಗಿ ಹೇಳುವ ಸ್ವಾತಂತ್ರ್ಯವನ್ನು ನಿರಾಕರಿಸಿದಾಗ, ಮನೆಯೊಳಗೆ ಅವರು ತೀವ್ರ ಮಾನಸಿಕ ಒತ್ತಡ ಮತ್ತು ಉಸಿರುಗಟ್ಟುವಿಕೆಯನ್ನು ಅನುಭವಿಸುತ್ತಾರೆ. ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳದ ಕುಟುಂಬದಿಂದ ದೂರವಾಗಿ ಪ್ರೇಮಿಯ ಕಡೆಗೆ ಸಂಪೂರ್ಣವಾಗಿ ವಾಲಿಬಿಡುತ್ತಾರೆ.
ಪ್ರೀತಿ ಒಮ್ಮೊಮ್ಮೆ ಗೀಳಾಗುತ್ತದೆ : ಕೆಲವೊಮ್ಮೆ ಪ್ರೀತಿ ಎಂಬುದು ಕ್ರಮೇಣ ಹುಚ್ಚು ಗೀಳಾಗಿ ಬದಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯುವಕ ಅಥವಾ ಯುವತಿಗೆ ತಮಗೆ ಪ್ರೇಮಿಯನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ದಾರಿಯೇ ಇಲ್ಲ ಎಂಬ ಭ್ರಮೆ ಸೃಷ್ಟಿಯಾಗುತ್ತದೆ. ಆಗ ಸರಿ-ತಪ್ಪುಗಳ ವಿವೇಚನೆ ಕಳೆದುಕೊಂಡು ಆತುರದಲ್ಲಿ ಇಂತಹ ಕ್ರೂರ ನಿರ್ಧಾರ ತೆಗೆದುಕೊಳ್ಳುತ್ತಾರೆ.
ವರ್ಚುವಲ್ ಪ್ರಪಂಚದ ಭ್ರಮೆ: ಇಂದಿನ ಸೋಷಿಯಲ್ ಮೀಡಿಯಾ ಮತ್ತು ವರ್ಚುವಲ್ ಪ್ರಪಂಚವು ಜನರನ್ನು ವಾಸ್ತವಿಕ ಜೀವನದಿಂದ ದೂರವಿಡುತ್ತಿದೆ. ತಾವು ಸೃಷ್ಟಿಸಿಕೊಂಡ ಕಲ್ಪನಾ ಲೋಕದಲ್ಲೇ ಮುಳುಗಿರುವ ಇಂದಿನ ಪೀಳಿಗೆಗೆ, ನಿಜ ಜೀವನದ ಕಾನೂನು ಮತ್ತು ಅದರ ಭೀಕರ ಪರಿಣಾಮಗಳ ಅರಿವೇ ಇರುವುದಿಲ್ಲ.
ಆದಾಗ್ಯೂ, ಈ ನಿರ್ದಿಷ್ಟ ಪ್ರಕರಣದಲ್ಲಿ ಸಂಪೂರ್ಣ ಪೊಲೀಸ್ ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆ ಮುಗಿಯುವ ಮುನ್ನ ಆರೋಪಿಯ ನಿಜವಾದ ಮಾನಸಿಕ ಸ್ಥಿತಿಯ ಬಗ್ಗೆ ಯಾವುದೇ ದೃಢವಾದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

