ಅಮೆರಿಕದ ಸಂಸ್ಥೆ ಜೊತೆ ಲಿಂಕ್; 92.55 ಕೋಟಿ ರೂ. ನಕ್ಸಲ್ ನಿಧಿ ಆರೋಪದ UAPA ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ!

ಬೆಂಗಳೂರು : ಅಮೆರಿಕ ಮೂಲದ ‘ದಿ ತಿಮೋತಿ ಇನಿಶಿಯೇಟಿವ್’ (The Timothy Initiative – TTI) ಎಂಬ ಕ್ರಿಶ್ಚಿಯನ್ ಮಿಷನರಿ ಸಂಸ್ಥೆಗೆ ಸೇರಿದ ಆರು ಮಂದಿ ಸಹವರ್ತಿಗಳ ವಿರುದ್ಧ ದಾಖಲಾಗಿರುವ ಕಠಿಣ UAPA (ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ) ಮೊಕದ್ದಮೆಯನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಬಲವಾಗಿ ನಿರಾಕರಿಸಿದೆ. ತನಿಖೆಯ ಈ ಹಂತದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್ ಪೀಠವು, ಅರ್ಜಿದಾರರು ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿದೆ.

ಜಸ್ಟಿಸ್ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ನೀಡಿದ್ದು, “ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಇಂತಹ ಗಂಭೀರ ಆರ್ಥಿಕ ಅಪರಾಧಗಳ ತನಿಖೆಯನ್ನು ಆರಂಭದಲ್ಲೇ ತಡೆಯಲು ಸಾಧ್ಯವಿಲ್ಲ. ಉಗ್ರಗಾಮಿ ಅಥವಾ ತೀವ್ರಗಾಮಿ ಚಳವಳಿಗಳು ಜೀವಂತವಾಗಿರಲು ಮತ್ತು ಹರಡಲು ಈ ಗುಪ್ತ ಧನಸಹಾಯವೇ (Clandestine Funding) ಪ್ರಮುಖ ಆಕ್ಸಿಜನ್ (Oxygen) ಇದ್ದಂತೆ” ಎಂದು ಅತ್ಯಂತ ಕಠಿಣ ಮಾತುಗಳಲ್ಲಿ ಸುದೀರ್ಘ ಆದೇಶ ನೀಡಿದೆ.

Advertisement

ಜಾರಿ ನಿರ್ದೇಶನಾಲಯವು (ED) ಕಳೆದ ಏಪ್ರಿಲ್ 18 ಮತ್ತು 19 ರಂದು ನಡೆಸಿದ ದಾಳಿಯ ವೇಳೆ ಭಾರಿ ಅಕ್ರಮ ಪತ್ತೆಯಾಗಿತ್ತು. ಅಮೆರಿಕದ ಬ್ಯಾಂಕ್‌ಗಳಿಂದ ವಿತರಿಸಲಾದ ಸುಮಾರು 1,000ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಡೆಬಿಟ್ ಕಾರ್ಡ್‌ಗಳನ್ನು ಭಾರತಕ್ಕೆ ತಂದು, ಇಲ್ಲಿನ ATMಗಳ ಮೂಲಕ ಕೋಟ್ಯಂತರ ರೂಪಾಯಿ ನಗದನ್ನು ವಿದೇಶಿ ನಿಯಂತ್ರಕ ಸಂಸ್ಥೆಗಳ (FEMA & FCRA) ಕಣ್ಣು ತಪ್ಪಿಸಿ ಡ್ರಾ ಮಾಡಲಾಗಿದೆ.

ಈ ಡೆಬಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಕೆವೈಸಿ (KYC) ನಿಯಮಾವಳಿಗಳನ್ನು ಉಲ್ಲಂಘಿಸಿ, “ಸಂತೋಷ್ ಕುಮಾರ್” ಎಂಬ ಸಾಮಾನ್ಯ ನಕಲಿ ಹೆಸರಿನಲ್ಲಿ ಸರಣಿ ರೂಪದಲ್ಲಿ ಬಳಸಲಾಗಿತ್ತು.

ನವೆಂಬರ್ 2025 ರಿಂದ ಏಪ್ರಿಲ್ 2026ರ ನಡುವಿನ ಕೆಲವೇ ತಿಂಗಳುಗಳಲ್ಲಿ ಸುಮಾರು ₹92.55 ಕೋಟಿ ಹಣವನ್ನು ಈ ಮೂಲಕ ಭಾರತದಲ್ಲಿ ಚಲಾವಣೆ ಮಾಡಲಾಗಿದೆ. ಇದರಲ್ಲಿ ದೊಡ್ಡ ಮೊತ್ತದ ಹಣವನ್ನು ಛತ್ತೀಸ್‌ಗಢ, ಅಸ್ಸಾಂ ಮತ್ತು ಕರ್ನಾಟಕದ ಎಡಪಂಥೀಯ ತೀವ್ರಗಾಮಿ (LWE) ಹಾಗೂ ನಕ್ಸಲ್ ಪೀಡಿತ ಸೂಕ್ಷ್ಮ ಪ್ರದೇಶಗಳಿಗೆ ರವಾನಿಸಲಾಗಿದೆ ಎಂದು ಇಡಿ ಗಂಭೀರ ಆರೋಪ ಮಾಡಿದೆ.ಇಡಿ ತನಿಖೆ ಆರಂಭವಾಗುತ್ತಿದ್ದಂತೆ, ಅಮೆರಿಕದಲ್ಲಿರುವ ಸರ್ವರ್‌ಗಳಿಂದ ಡಿಜಿಟಲ್ ರೆಕಾರ್ಡ್ಸ್ ಹಾಗೂ ಡೇಟಾಗಳನ್ನು ರಿಮೋಟ್ ಮೂಲಕ ಡಿಲೀಟ್ ಮಾಡಿ ಸಾಕ್ಷ್ಯ ನಾಶಪಡಿಸಲಾಗಿದೆ ಎಂದು ದೂರಲಾಗಿದೆ.

ಇದನ್ನೂ ಓದಿ:High Court : ಸೆಷನ್ ಕೋರ್ಟ್‌ಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ : ಹೈಕೋರ್ಟ್

ಇಡಿ ಅಧಿಕಾರಿಗಳು ನೀಡಿದ ಅಧಿಕೃತ ದೂರಿನ (Section 66(2) PMLA ಅಡಿಯಲ್ಲಿ ಹಂಚಿಕೊಂಡ ಮಾಹಿತಿ) ಆಧಾರದ ಮೇಲೆ ಬೆಂಗಳೂರಿನ ಕೊತನೂರು ಪೊಲೀಸ್ ಠಾಣೆಯಲ್ಲಿ ಜೂನ್ 11 ರಂದು ಮೈಕಾ ಮಾರ್ಕ್, ಜೊನಾಥನ್ ಎಸ್. ರಾಜನ್, ಅಜಿತ್ ವರ್ಗೀಸ್ ಮ್ಯಾಥ್ಯೂ ಸೇರಿದಂತೆ ಆರು ಜನರ ವಿರುದ್ಧ ಉಗ್ರ ನಿಗ್ರಹ ಕಾಯ್ದೆ (UAPA) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಹೈಕೋರ್ಟ್ ಆದೇಶದಿಂದ ತನಿಖಾ ಸಂಸ್ಥೆಗಳಿಗೆ ದೊಡ್ಡ ಜಯ ಸಿಕ್ಕಂತಾಗಿದ್ದು, ತನಿಖೆ ಚುರುಕುಗೊಂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *