ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಹಾಗೂ ಪವಿತ್ರಾ ಗೌಡ ಪ್ರಮುಖ ಆರೋಪಿಗಳಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಮತ್ತೊಂದು ದೊಡ್ಡ ತಿರುವು ಸಿಕ್ಕಿದೆ. ಪ್ರಕರಣದ 49ನೇ ಪ್ರಮುಖ ಸಾಕ್ಷಿಯಾಗಿರುವ ಸಂದೀಪ್ ಎಂಬುವವರಿಗೆ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಧಮ್ಕಿ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅಭಿಮಾನಿ ಬಳಗದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅದಿರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸಾಕ್ಷಿಗೆ ಬೆದರಿಕೆ ಹಾಕಿದ ‘ಡಿ ಕಂಪನಿ’ ಫ್ಯಾನ್ಸ್:

ಬಂಧಿತ ಆರೋಪಿಗಳನ್ನು ವೇಣು, ಸುಹಾಸ್ ಮತ್ತು ಪುನೀತ್ ಎಂದು ಗುರುತಿಸಲಾಗಿದೆ. ಪೊಲೀಸರು ಇವರ ಹಿನ್ನೆಲೆಯನ್ನು ಕೆದಕಿದಾಗ ಆಘಾತಕಾರಿ ಸತ್ಯಗಳು ಬೆಳಕಿಗೆ ಬಂದಿವೆ. ಬಂಧಿತರಲ್ಲಿ ಪುನೀತ್ ಎಂಬಾತ ಸೋಷಿಯಲ್ ಮೀಡಿಯಾದಲ್ಲಿ ‘ಡಿ ಕಂಪನಿ’ (D Company) ಹೆಸರಿನ ದರ್ಶನ್ ಫ್ಯಾನ್ ಪೇಜ್ ಅನ್ನು ಸಕ್ರಿಯವಾಗಿ ನಿರ್ವಹಿಸುತ್ತಿದ್ದ. ಇನ್ನುಳಿದ ಇಬ್ಬರು ಆರೋಪಿಗಳಾದ ಸುಹಾಸ್ ಮತ್ತು ವೇಣು ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಪ್ರಮುಖ ಸದಸ್ಯರಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರಿನಲ್ಲಿ ಅಪಹರಿಸಿ ಪ್ರಾಣ ಬೆದರಿಕೆ:
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ, ಸಾಕ್ಷಿದಾರ ಸಂದೀಪ್ ಅವರ ಜೊತೆ ಮಾತುಕತೆ ನಡೆಸುವ ನೆಪದಲ್ಲಿ ಈ ಗ್ಯಾಂಗ್ ಯಾವುದೋ ಒಂದು ಜಾಗಕ್ಕೆ ಕರೆಸಿಕೊಂಡಿತ್ತು. ಆ ಬಳಿಕ ಆತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ನಗರದಾದ್ಯಂತ ಸುತ್ತಾಡಿಸಿದ್ದಾರೆ. ಈ ವೇಳೆ ಕೋರ್ಟ್‌ನಲ್ಲಿ ದರ್ಶನ್ ವಿರುದ್ಧ ಯಾವುದೇ ಸಾಕ್ಷಿ ನುಡಿಯಬಾರದು ಎಂದು ತೀವ್ರ ಒತ್ತಡ ಹೇರಿದ್ದಾರೆ. ಇದಕ್ಕೆ ಸಾಕ್ಷಿದಾರ ಸಂದೀಪ್ ಒಪ್ಪದಿದ್ದಾಗ, ಆರೋಪಿ ಸುಹಾಸ್ ಜೈಲಿನಲ್ಲಿರುವ ನಟ ದರ್ಶನ್ ಹೆಸರೇಳಿ ನೇರವಾಗಿ ಪ್ರಾಣ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ತಮಗೆ ಎದುರಾದ ಬೆದರಿಕೆಯ ಕುರಿತು ಸಾಕ್ಷಿದಾರ ಸಂದೀಪ್ ನ್ಯಾಯಾಲಯದ ಮುಂದೆ ಧೈರ್ಯವಾಗಿ ಹೇಳಿಕೆ ನೀಡಿದ್ದರು. ಇವರ ಹೇಳಿಕೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ಸಾಕ್ಷಿದಾರನಿಗೆ ತಕ್ಷಣವೇ ಬಿಗಿ ಪೊಲೀಸ್ ರಕ್ಷಣೆ ಒದಗಿಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಸದ್ಯ ಮೂವರನ್ನು ಅರೆಸ್ಟ್ ಮಾಡಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿನ ಆರ್‌ಆರ್ ನಗರದ ಶೆಡ್‌ಗೆ ಕರೆತಂದು ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ಈಗಾಗಲೇ ಸುದೀರ್ಘ ಕಾಲ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಸದ್ಯ ಪ್ರಕರಣದ ನ್ಯಾಯಾಂಗ ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

