ಗೃಹ ಜ್ಯೋತಿ ಯೋಜನೆ: ಜಾತಿ ವಿವರ ನೀಡುವುದು ಕಡ್ಡಾಯವಲ್ಲ; ಸಾರ್ವಜನಿಕರ ತೀವ್ರ ವಿರೋಧದ ಬೆನ್ನಲ್ಲೇ ಬೆಸ್ಕಾಂ ಸ್ಪಷ್ಟನೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳ ಮಾಹಿತಿ ಪರಿಶೀಲನೆ ನಡೆಸುವಾಗ ಜಾತಿ (Caste) ವಿವರಗಳನ್ನು ನೀಡುವುದು ಕಡ್ಡಾಯವಲ್ಲ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಸ್ಪಷ್ಟಪಡಿಸಿದೆ.

ಜುಲೈ 1 ರಿಂದ ರಾಜ್ಯಾದ್ಯಂತ ಗೃಹ ಜ್ಯೋತಿ ಯೋಜನೆಯ ಅರ್ಹ ಫಲಾನುಭವಿಗಳ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಮತ್ತು ಮುದ್ರಿತ ಘೋಷಣಾ ಪತ್ರದ (Declaration Form) ಮೂಲಕ ಗ್ರಾಹಕರ ವಿವರಗಳನ್ನು ಕಲೆ ಹಾಕುತ್ತಿದ್ದಾರೆ.

Advertisement

ಇದನ್ನೂ ಓದಿ: ‘ಗೃಹಜ್ಯೋತಿಯಲ್ಲಿ ಯಾವುದೇ ಕಡಿತ ಇಲ್ಲ, ಜಾತಿ ಪ್ರಮಾಣಪತ್ರವೂ ಬೇಕಾಗಿಲ್ಲ: ಕೆ.ಜೆ. ಜಾರ್ಜ್‌ ಸ್ಪಷ್ಟನೆ

ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದ್ದೇನು?

ಮಾಹಿತಿ ಸಂಗ್ರಹಣೆಯ ಸಂದರ್ಭದಲ್ಲಿ ಫಲಾನುಭವಿಯ ಪ್ರವರ್ಗ (ಜಾತಿ ಪ್ರಮಾಣಪತ್ರ) ಹಾಗೂ ಉಪಜಾತಿಯ ವಿವರಗಳನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತಲ್ಲದೆ, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಉಚಿತ ವಿದ್ಯುತ್ ಯೋಜನೆಗೆ ಜಾತಿಯ ವಿವರ ಏಕೆ ಬೇಕು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿದ್ದವು.

ಬೆಸ್ಕಾಂ ನೀಡಿದ ಸ್ಪಷ್ಟನೆ:

ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಬೆಸ್ಕಾಂ ಇಲಾಖೆ ತಕ್ಷಣವೇ ಅಧಿಕೃತ ಸ್ಪಷ್ಟನೆ ನೀಡಿದೆ. “ಗೃಹ ಜ್ಯೋತಿ ಫಲಾನುಭವಿಗಳ ಪ್ರವರ್ಗಕ್ಕೆ (ಜಾತಿ) ಸಂಬಂಧಿಸಿದ ಮಾಹಿತಿಯು ಕಡ್ಡಾಯವಲ್ಲ (Not Mandatory). ಅದು ಕೇವಲ ಐಚ್ಛಿಕ (Optional) ಮಾಹಿತಿಯಾಗಿದೆ. ಜಾತಿ ವಿವರಗಳನ್ನು ನೀಡುವುದು ಅಥವಾ ಬಿಡುವುದು ಸಂಪೂರ್ಣವಾಗಿ ಸಾರ್ವಜನಿಕರ ವೈಯಕ್ತಿಕ ಆಯ್ಕೆಯಾಗಿರುತ್ತದೆ” ಎಂದು ಬೆಸ್ಕಾಂ ತಿಳಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *