ಇರಾಕ್‌ನಲ್ಲಿ ಭ್ರಷ್ಟಾಚಾರದ ವಿರುದ್ಧ ಬೃಹತ್ ಕಾರ್ಯಾಚರಣೆ: ಸಂಸದೆಯ ಮನೆಯಲ್ಲಿ ಚಿನ್ನದ ಒಳ ಉಡುಪು, 57 ಮಿಲಿಯನ್ ಡಾಲರ್ ನಗದು ಜಪ್ತಿ!

ಬಾಗ್ದಾದ್: ಇರಾಕ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ಇಲಾಖೆಯು ನಡೆಸಿರುವ ದೈತ್ಯ ಕಾರ್ಯಾಚರಣೆಯೊಂದರಲ್ಲಿ ಅಲ್ಲಿನ ಮಹಿಳಾ ಸಂಸದೆಯೊಬ್ಬರ ಮನೆಯಿಂದ ಭಾರಿ ಪ್ರಮಾಣದ ನಗದು ಹಾಗೂ ಬಂಗಾರ ಪತ್ತೆಯಾಗಿರುವ ಬೆಚ್ಚಿಬೀಳಿಸುವ ವರದಿ ಹೊರಬಿದ್ದಿದೆ. ಇರಾಕ್‌ನ ಸಂಸದೆ (MP) ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯ ವೇಳೆ ಅಂದಾಜು 57 ಮಿಲಿಯನ್ ಅಮೆರಿಕನ್ ಡಾಲರ್ ನಗದು ಹಾಗೂ 27 ಕೆಜಿ ಶುದ್ಧ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈ ದಾಳಿಯಲ್ಲಿ ಚಿನ್ನದ ಲೇಪಿತ ಒಳ ಉಡುಪುಗಳು (Gold-plated Underwear) ಸಹ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಪ್ರಧಾನಿ ಅಲಿ ಅಲ್-ಜೈದಿ ನೇತೃತ್ವದ ಸರ್ಕಾರವು ಸಾರ್ವಜನಿಕ ನಿಧಿಯ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ದೇಶಾದ್ಯಂತ ಈ ಬೃಹತ್ ಜಂಟಿ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.

ಸಂಸದರು, ಅಧಿಕಾರಿಗಳು ಸೇರಿ 47 ಮಂದಿ ಬಂಧನ:

ಇರಾಕ್ ರಾಜಧಾನಿ ಬಾಗ್ದಾದ್ ಸೇರಿದಂತೆ ಹಲವು ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಪಡೆಗಳು ಮುಂಜಾನೆಯೇ ಏಕಕಾಲಕ್ಕೆ ದಾಳಿ ನಡೆಸಿವೆ. ಈ ತನಿಖೆಯ ಭಾಗವಾಗಿ ಇರಾಕ್ ಸಂಸತ್ತಿನ 7 ಹಾಲಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 47 ಶಂಕಿತರನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಅಪಾರ ಪ್ರಮಾಣದ ನಗದು, ಚಿನ್ನದ ಜೊತೆಗೆ ಅಕ್ರಮ ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇರಾಕ್‌ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನೀಡಿರುವ ಮಾಹಿತಿಯ ಪ್ರಕಾರ, ಮಾಜಿ ಉಪ ತೈಲ ಸಚಿವರಿಗೆ ಸೇರಿದ ತನಿಖೆಯೊಂದರಲ್ಲಿ ಸುಮಾರು 10 ಮಿಲಿಯನ್ ಡಾಲರ್ ನಗದು, 3 ಬಿಲಿಯನ್ ಇರಾಕಿ ದಿನಾರ್, ಚಿನ್ನದ ಆಭರಣಗಳು ಮತ್ತು ಬರೋಬ್ಬರಿ 40 ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಭೀಕರ ದುರಂತ: 11 ವರ್ಷದ ಬಾಲಕ ಚಲಾಯಿಸುತ್ತಿದ್ದ ಕಾರು ಡಿಕ್ಕಿ; 9 ಬೌದ್ಧ ಸನ್ಯಾಸಿಗಳು ದಾರುಣ ಸಾವು!

ಮುಂದುವರಿದ ತನಿಖೆ:

ಆರೋಪ ಎದುರಿಸುತ್ತಿರುವ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ಹೆಸರು ಇರಾಕ್ ಸಂಸತ್ತಿನ ಅಧಿಕೃತ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದ್ದರೂ, ಅವರ ಮನೆಯಲ್ಲಿ ಪತ್ತೆಯಾಗಿದೆ ಎನ್ನಲಾದ ವಸ್ತುಗಳ ಬಗ್ಗೆ ಅಧಿಕೃತ ಸಂಸ್ಥೆಗಳಿಂದ ಇನ್ನಷ್ಟೇ ಸಂಪೂರ್ಣ ವಿವರವಾದ ಹೇಳಿಕೆಗಳು ಖಚಿತವಾಗಬೇಕಿದೆ. “ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿ ಇಲ್ಲ” ಎಂದು ಪ್ರಧಾನಿ ಅಲಿ ಅಲ್-ಜೈದಿ ಘೋಷಿಸಿದ್ದು, ಮುಂಬರುವ ದಿನಗಳಲ್ಲಿ ಈ ಕಾರ್ಯಾಚರಣೆ ಮತ್ತಷ್ಟು ವಿಸ್ತರಣೆಯಾಗುವ ಮುನ್ಸೂಚನೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ