ಉಡುಪಿ: ಉಡುಪಿಯ ಮಾಲ್ಪೆಯ ಖ್ಯಾತ ಜಲಕ್ರೀಡಾ ಉದ್ಯಮಿ ಸಂದೀಪ್ ಸಾಲಿಯಾನ್ (42) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹನಿ ಟ್ರ್ಯಾಪ್ ಮತ್ತು ದರೋಡೆ ಜಾಲದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತೆಯನ್ನು ಅಕ್ಷತಾ ಎಂ.ಕೆ. ಅಲಿಯಾಸ್ ರೂಪಶ್ರೀ ಸಿ., ಮೂಲತಃ ಮಂಗಳೂರಿನ ನಿವಾಸಿ ಎಂದು ಗುರುತಿಸಲಾಗಿದೆ. ಜುಲೈ 3ರ ರಾತ್ರಿ ಬೆಂಗಳೂರಿನಲ್ಲಿ ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ಗೋವಾ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಅಕ್ಷತಾ ವಿರುದ್ಧ ಈಗಾಗಲೇ ಉದ್ಯಮಿಯೊಬ್ಬರನ್ನು ಹನಿ ಟ್ರ್ಯಾಪ್ ಮೂಲಕ ವಂಚಿಸಿ ದರೋಡೆ ನಡೆಸಿದ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಉಡುಪಿಯ ಉದ್ಯಮಿ ಸಂದೀಪ್ ಸಾಲಿಯಾನ್ ಅವರ ಸಾವಿನ ಪ್ರಕರಣದಲ್ಲೂ ಆಕೆಯ ಪಾತ್ರ ಬೆಳಕಿಗೆ ಬಂದಿದ್ದು, ಇದೀಗ ಈ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರು ಗುರುತಿಸಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ತುತ್ತತುದಿಗೆ ಹತ್ತಿ ಪ್ರೇಮ ನಿವೇದನೆ: ರಷ್ಯಾದ ಸಾಹಸಿ ಜೋಡಿ ಬಂಧನ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶ್ರೀಮಂತ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಕ್ಯಾಸಿನೋಗಳಲ್ಲಿ ಪರಿಚಯ ಬೆಳೆಸಿ, ಬಳಿಕ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ಪ್ರಜ್ಞೆ ತಪ್ಪಿಸಿ, ಹಣ ಮತ್ತು ಅಮೂಲ್ಯ ವಸ್ತುಗಳನ್ನು ದೋಚಿ, ನಂತರ ಬ್ಲ್ಯಾಕ್‌ಮೇಲ್ ಮಾಡುವುದು ಈ ಜಾಲದ ಕಾರ್ಯವೈಖರಿಯಾಗಿತ್ತು ಎಂದು ಆರೋಪಿಸಲಾಗಿದೆ.
ಸಂದೀಪ್ ಸಾಲಿಯಾನ್ ಅವರು ಈ ಹಿಂದೆ ಕರ್ನಾಟಕದ ಮಾಜಿ ಸಚಿವರೊಬ್ಬರ ಬಳಿ ಚಾಲಕರಾಗಿ ಕೆಲಸ ಮಾಡಿದ್ದರು. ಬಳಿಕ ಮಾಲ್ಪೆಯಲ್ಲಿ ಜಲಕ್ರೀಡಾ ಉದ್ಯಮ ಆರಂಭಿಸಿ, ಅಲ್ಪಾವಧಿಯಲ್ಲೇ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.
ಸದ್ಯ ಪೊಲೀಸರು ಸಂದೀಪ್ ಸಾಲಿಯಾನ್ ಅವರ ಸಾವಿನ ನಿಖರ ಕಾರಣ, ಘಟನೆಗೆ ಸಂಬಂಧಿಸಿದ ಇತರರ ಪಾತ್ರ ಹಾಗೂ ಹನಿ ಟ್ರ್ಯಾಪ್ ಜಾಲದ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ತನಿಖೆಯನ್ನು ಮುಂದುವರಿಸಿದ್ದಾರೆ.

