ಮಾಣಿ : ಪುತ್ತೂರು ರಸ್ತೆಯ ಮಾಣಿ ಬಳಿ ಇಂದು ಸುರಿದ ಭಾರಿ ಗಾಳಿ-ಮಳೆಗೆ ರಸ್ತೆ ಬದಿಯ ದೈತ್ಯ ಮರ ಹಾಗೂ 6 ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಸಂಭವಿಸಿದೆ. ಮರವು ರಸ್ತೆಯ ಮಧ್ಯಕ್ಕೆ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಘಟನೆ ನಡೆದ ತಕ್ಷಣವೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಮರವನ್ನು ಜೆಸಿಬಿ ಹಾಗೂ ಮರ ಕಟಾವು ಯಂತ್ರಗಳನ್ನು ಬಳಸಿ ಕತ್ತರಿಸಿ, ತೆರವುಗೊಳಿಸಿದ್ದಾರೆ. ಅರಣ್ಯ ಇಲಾಖೆಯ ತಕ್ಷಣದ ಕಾರ್ಯಾಚರಣೆಯಿಂದಾಗಿ ರಸ್ತೆಯಲ್ಲಿದ್ದ ಮರ ತೆರವುಗೊಂಡು, ಸದ್ಯ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಭಾರಿ ಮಳೆಗೆ ರಸ್ತೆ ಬದಿಗೆ ಬಾಗಿ ನಿಂತಿದ್ದ ಇತರ ಅಪಾಯಕಾರಿ ಮರಗಳನ್ನು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತೆರವು ಮಾಡಲಾಗಿದೆ.

ಇದನ್ನೂ ಓದಿ: ಆರೋಗ್ಯ ಟಿಪ್ಸ್: ಮಳೆಗಾಲದಲ್ಲಿ ‘ಹಲಸಿನ ಹಣ್ಣು’ ತಿಂದರೆ ಅಮೃತನಾ ಅಥವಾ ಅಪಾಯನಾ?

ಮರದೊಂದಿಗೆ ವಿದ್ಯುತ್ ಕಂಬವೂ ರಸ್ತೆಗೆ ಉರುಳಿ ಬಿದ್ದಿರುವುದರಿಂದ ತೀವ್ರ ಅಪಾಯ ಎದುರಾಗಿತ್ತು. ಘಟನೆ ಸಂಭವಿಸಿ ಗಂಟೆಗಳು ಕಳೆದರೂ ಸ್ಥಳಕ್ಕೆ ಯಾವುದೇ ಲೈನ್ ಮ್ಯಾನ್ ಆಗಲಿ ಅಥವಾ ಮೆಸ್ಕಾಂ ಅಧಿಕಾರಿಗಳಾಗಲಿ ಬಾರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್ ತಂತಿಗಳು ರಸ್ತೆಯಲ್ಲೇ ಬಿದ್ದಿರುವುದರಿಂದ ಯಾವುದೇ ಅನಾಹುತ ಸಂಭವಿಸುವ ಮುನ್ನ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಬಂದು ಕಂಬ ದುರಸ್ತಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

