Breaking News

ಮಹಾ ಪ್ರವಾಹದ ನಡುವೆ ಆತಂಕ: HPCL ಪ್ಲಾಂಟ್‌ಗೆ ನುಗ್ಗಿದ ನೀರು; ಪಾತಾಳಗಂಗಾ ನದಿಯಲ್ಲಿ ತೇಲಿಬಂದವು 3,000 ಗ್ಯಾಸ್ ಸಿಲಿಂಡರ್

ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ವರುಣನ ರೌದ್ರಾವತಾರ ಮುಂದುವರಿದಿದ್ದು, ಭೀಕರ ಮಳೆ ಮತ್ತು ಪ್ರವಾಹದ ನಡುವೆ ಅತ್ಯಂತ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಜಿಲ್ಲೆಯ ಖಲಾಪುರ ತಾಲೂಕಿನಲ್ಲಿರುವ ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಗ್ಯಾಸ್ ಬಾಟ್ಲಿಂಗ್ ಸ್ಥಾವರಕ್ಕೆ ಪ್ರವಾಹದ ನೀರು ನುಗ್ಗಿದ ಪರಿಣಾಮ, ಆವರಣದಲ್ಲಿದ್ದ ಬರೋಬ್ಬರಿ 3,000 ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿವೆ!

ಖಲಾಪುರದ ಎಂಐಡಿಸಿ (MIDC) ಕೈಗಾರಿಕಾ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ ಪ್ಲಾಂಟ್‌ನ ಸಿಲಿಂಡರ್ ಸಂಗ್ರಹಣಾ ಆವರಣವು ಸಂಪೂರ್ಣ ಜಲಾವೃತಗೊಂಡಿದ್ದರಿಂದ ಈ ಅವಾಂತರ ಸೃಷ್ಟಿಯಾಗಿದೆ. ಕೊಚ್ಚಿಹೋದ ಸಾವಿರಾರು ಸಿಲಿಂಡರ್‌ಗಳು ಹತ್ತಿರದ ಪಾತಾಳಗಂಗಾ ನದಿಯಲ್ಲಿ ಸಾಲು ಸಾಲಾಗಿ ತೇಲುತ್ತಾ ಸಾಗುತ್ತಿದ್ದು, ಈ ದೃಶ್ಯಗಳ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ:

&nb

ನದಿಯಲ್ಲಿ ಸಾವಿರಾರು ಸಿಲಿಂಡರ್‌ಗಳು ತೇಲಿಬರುತ್ತಿರುವುದನ್ನು ಕಂಡ ನದಿ ತೀರದ ಗ್ರಾಮಸ್ಥರು ಹಾಗೂ ಸ್ಥಳೀಯ ನಿವಾಸಿಗಳು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಿಲಿಂಡರ್‌ಗಳನ್ನು ದಡಕ್ಕೆ ಎಳೆದು ತರುತ್ತಿದ್ದಾರೆ. ಅಷ್ಟೇ ಅಲ್ಲದೆ, ಸಿಕ್ಕಸಿಕ್ಕ ಸಿಲಿಂಡರ್‌ಗಳನ್ನು ತಂತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ ಎಂಬ ವರದಿಗಳು ಬಿಡುಗಡೆಯಾಗಿದ್ದು, ಇದು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳ ನಿದ್ದೆ ಕೆಡಿಸಿದೆ.

ಇದನ್ನೂ ಓದಿ:Viral: ಅಂಗಡಿಗೆ ನುಗ್ಗಿ ಚಿನ್ನ ಕದ್ದು ಹಾರಿಹೋದ ಕಾಗೆ! ಮುಂದೆನಾಯ್ತು?- Video

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತಕ್ಷಣ ಕಾರ್ಯಪ್ರವೃತ್ತರಾಗಿರುವ ರಾಯಗಢ ಜಿಲ್ಲಾಧಿಕಾರಿಗಳು ಸಾರ್ವಜನಿಕರಿಗೆ ಕಠಿಣ ಮುನ್ನೆಚ್ಚರಿಕೆ ನೀಡಿದ್ದಾರೆ. ನದಿಯಲ್ಲಿ ಕೊಚ್ಚಿಬಂದಿರುವ ಸಿಲಿಂಡರ್‌ಗಳು ಭರ್ತಿಯಾಗಿವೆಯೇ ಅಥವಾ ಖಾಲಿಯಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರವಾಹದ ನೀರಿನ ರಭಸಕ್ಕೆ ಮತ್ತು ಒಂದಕ್ಕೊಂದು ಡಿಕ್ಕಿ ಹೊಡೆದ ಕಾರಣ ಅವುಗಳ ವಾಲ್ವ್‌ಗಳು (Valves) ಹಾನಿಗೊಳಗಾಗಿ ಅನಿಲ ಸೋರಿಕೆಯಾಗುತ್ತಿರುವ ಸಾಧ್ಯತೆ ದಟ್ಟವಾಗಿದೆ.

ಯಾವುದೇ ನಾಗರಿಕರು ಈ ಸಿಲಿಂಡರ್‌ಗಳನ್ನು ತಮ್ಮ ವೈಯಕ್ತಿಕ ಬಳಕೆಗೆ ಮನೆಗೆ ಕೊಂಡೊಯ್ಯಬಾರದು ಮತ್ತು ಅವುಗಳನ್ನು ಯಾವುದೇ ಕಾರಣಕ್ಕೂ ತೆರೆಯಲು ಪ್ರಯತ್ನಿಸಬಾರದು. ಸಣ್ಣ ನಿರ್ಲಕ್ಷ್ಯವೂ ಭೀಕರ ಸ್ಫೋಟ ಮತ್ತು ಪ್ರಾಣಹಾನಿಗೆ ಕಾರಣವಾಗಬಹುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಸದ್ಯ ಸ್ಥಳೀಯ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ತಂಡಗಳು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದು, ಜನರು ಕೊಂಡೊಯ್ದಿರುವ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳುವ ಹಾಗೂ ನದಿಯಲ್ಲಿ ಉಳಿದಿರುವ ಸಿಲಿಂಡರ್‌ಗಳನ್ನು ಸುರಕ್ಷಿತವಾಗಿ ಹೊರತೆಗೆಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *