ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಅಗ್ನಿ ದುರಂತ: 27 ಜನ ಸಜೀವ ದಹನ, ಹಲವರ ಸ್ಥಿತಿ ಗಂಭೀರ

ಬ್ಯಾಂಕಾಕ್: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನ ಪಬ್ ಒಂದರಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅಪಘಾತದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಥೈಲ್ಯಾಂಡ್‌ನ ಪ್ರವಾಸಿ ತಾಣವೊಂದರಲ್ಲಿ ನಡೆದ ಅತ್ಯಂತ ಘೋರ ದುರಂತಗಳಲ್ಲಿ ಇದು ಒಂದಾಗಿದೆ.

ಉತ್ತರ ಬ್ಯಾಂಕಾಕ್‌ನ ಚತುಚಾಕ್ ಜಿಲ್ಲೆಯ ಸೋಯ್ ಲಾಟ್ ಪ್ರಾವ್ ರೋಡ್ ಬಳಿ ಇರುವ ಜನಪ್ರಿಯ “ನಾ ಲಾಡ್‌ಪ್ರಾವ್” (Na Ladprao) ಪಬ್‌ನಲ್ಲಿ ತಡರಾತ್ರಿ ಸುಮಾರು 12 ಗಂಟೆಯ (ಮಧ್ಯರಾತ್ರಿ) ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಪಬ್‌ನ ಮುಂಭಾಗದ ಪ್ರವೇಶ ದ್ವಾರವನ್ನು ಜ್ವಾಲೆಗಳು ಸಂಪೂರ್ಣವಾಗಿ ಆವರಿಸಿಕೊಂಡವು. ಇಡೀ ಕಟ್ಟಡದಲ್ಲಿ ದಟ್ಟವಾದ ಕಪ್ಪು ಹೊಗೆ ಕ್ಷಣಾರ್ಧದಲ್ಲಿ ಹರಡಿತು. ವಿದ್ಯುತ್ ಸಂಪರ್ಕ ಕಡಿತಗೊಂಡು ಇಡೀ ಪಬ್ ಕತ್ತಲೆಯಲ್ಲಿ ಮುಳುಗಿದ್ದರಿಂದ ಗ್ರಾಹಕರು ಹೊರಗೆ ಬರಲಾರದೆ ಒಳಗೆ ಸಿಲುಕಿಕೊಂಡರು.

ಇಲ್ಲಿದೆ ನೋಡಿ ವಿಡಿಯೋ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಥೈಲ್ಯಾಂಡ್ ಪ್ರಧಾನಿ ಅನುತಿನ್ ಚಾರ್ನ್ವಿರಾಕುಲ್, “ಬೆಂಕಿ ಹೊತ್ತಿಕೊಂಡ ತಕ್ಷಣ ದಟ್ಟವಾದ ಹೊಗೆ ತುಂಬಿಕೊಂಡಿದ್ದರಿಂದ ಜನರು ದಿಕ್ಕೆಟ್ಟು ಪಬ್‌ನ ಹಿಂಭಾಗದಲ್ಲಿದ್ದ ಶೌಚಾಲಯಗಳ ಕಡೆಗೆ ಓಡಿದ್ದಾರೆ. ಆದರೆ ಅಲ್ಲಿ ಯಾವುದೇ ತುರ್ತು ನಿರ್ಗಮನ ದ್ವಾರಗಳು (Fire Escapes) ಇಲ್ಲದ ಕಾರಣ ಹೆಚ್ಚಿನ ಬಲಿಪಶುಗಳು ಅಲ್ಲಿಯೇ ಸಿಲುಕಿ ಸಾವನ್ನಪ್ಪಿದ್ದಾರೆ,” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಯೆಟ್ನಾಂನಲ್ಲಿ: ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಿ 15 ಮಂದಿ ಸಾವು

ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದ ಸಂಗೀತಗಾರನೊಬ್ಬನ ಪ್ರಕಾರ, ಸ್ಟೇಜ್ ಬಳಿ ಇದ್ದ ಸರ್ಕ್ಯೂಟ್ ಬ್ರೇಕರ್‌ನಿಂದ ಮೊದಲು ಹೊಗೆ ಬಂದಿತು. ತಕ್ಷಣವೇ ವಿದ್ಯುತ್ ಸ್ಥಗಿತಗೊಂಡು ಭಾರಿ ಸ್ಫೋಟದ ಸದ್ದು ಕೇಳಿಸಿತು, ನಂತರ ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿತು.

ದುರಂತದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದು, ಇವರಲ್ಲಿ 9 ಪುರುಷರು ಮತ್ತು 18 ಮಹಿಳೆಯರು ಸೇರಿದ್ದಾರೆ ಎನ್ನಲಾಗಿದೆ. ಗಾಯಗೊಂಡ 63 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬ್ಯಾಂಕಾಕ್ ಗವರ್ನರ್ ಚಾಡ್‌ಚಾರ್ಟ್ ಸಿತ್ತಿಪಂಟ್ ನೀಡಿರುವ ಮಾಹಿತಿ ಪ್ರಕಾರ 22 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಸುಮಾರು 30 ರಿಂದ 35 ನಿಮಿಷಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಸದ್ಯ ಘಟನೆಯ ಬಗ್ಗೆ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ತನಿಖೆ ಆರಂಭಿಸಿದೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *