ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ನುಸುಳುವಿಕೆ ಪ್ರಕರಣಗಳು ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿವೆ. ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಳವೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು, ಅಕ್ರಮವಾಗಿ ಭಾರತ ಪ್ರವೇಶಿಸಿ ಕೂಲಿ ಕೆಲಸ ಮಾಡುತ್ತಿದ್ದ 11 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ 11 ಮಂದಿಯಲ್ಲಿ ನಾಲ್ವರು ಅಪ್ರಾಪ್ತ ವಯಸ್ಕರೂ ಸೇರಿದ್ದಾರೆ. ಈ ಹೊಸ ಬಂಧನದೊಂದಿಗೆ, ಕಳೆದ ಕೆಲವೇ ದಿನಗಳಲ್ಲಿ ಮಂಗಳೂರು ಕರಾವಳಿ ಭಾಗದಲ್ಲಿ ಪತ್ತೆಯಾದ ಒಟ್ಟು ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಈಗ 17ಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಗಳ ಗುರುತು ಪತ್ತೆ:
ಖಚಿತ ಮಾಹಿತಿಯ ಆಧಾರದ ಮೇಲೆ ಉರ್ವಾ ಪೊಲೀಸರ ತಂಡವು ಈ ದಿಢೀರ್ ದಾಳಿ ನಡೆಸಿತ್ತು. ಬಂಧಿತ ಪ್ರಮುಖ ಆರೋಪಿಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:
ಎಂ.ಡಿ. ಕೌಸರ್ ಅಲಿ
ಎಂ.ಡಿ. ನೂರ್ ಅಮೀನ್
ಎಂ.ಡಿ. ನಾಹಿದುಲ್ ಇಸ್ಲಾಂ
ಹುಮಾಯೂನ್ ಕಬೀರ್
ರೊಮ್ಜಾನ್ ಅಲಿ
ಅಬ್ದುಲ್ ರಹಮಾನ್ ರೊಯೆಲ್
ನೋಯಾನ್
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಈ ಜಾಲದ ಭೀಕರತೆ ಬಯಲಾಗಿದೆ. ಆರೋಪಿಗಳು ಯಾವುದೇ ಅಧಿಕೃತ ಪಾಸ್ಪೋರ್ಟ್ ಅಥವಾ ವೀಸಾ ಇಲ್ಲದೆ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಭಾರತದೊಳಗೆ ನುಸುಳಿದ್ದರು. ಬಳಿಕ ದೇಶದೊಳಗೆ ರಾಜಾರೋಷವಾಗಿ ಓಡಾಡಲು ಪಶ್ಚಿಮ ಬಂಗಾಳ ಮೂಲದ ನಕಲಿ ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿಗಳನ್ನು (Fake IDs) ಸೃಷ್ಟಿಸಿಕೊಂಡಿದ್ದರು. ಇದೇ ನಕಲಿ ದಾಖಲೆಗಳನ್ನು ತೋರಿಸಿ ಮಂಗಳೂರಿಗೆ ಬಂದು ಯಾರಿಗೂ ಸಂಶಯ ಬಾರದಂತೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ:ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ನಾಲ್ಕು ವರ್ಷಗಳ ಬಳಿಕ ಮತ್ತಿಬ್ಬರು ಆರೋಪಿಗಳು ಎನ್ಐಎ ಬಲೆಗೆ
ವಲಸಿಗರಿಗೆ ಭಾರತದ ಗಡಿ ದಾಟಲು ನೆರವು ನೀಡಿ, ನಕಲಿ ವಿಳಾಸಗಳನ್ನು ಒದಗಿಸಿ ಮಂಗಳೂರಿನಲ್ಲಿ ಕೆಲಸ ಕೊಡಿಸುತ್ತಿದ್ದ ದೊಡ್ಡ ಜಾಲವೊಂದು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ಪ್ರಮುಖ ಏಜೆಂಟ್ ಒಬ್ಬನ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಅಧಿಕೃತವಾಗಿ ಎಫ್ಐಆರ್ (FIR) ದಾಖಲಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಮಂಗಳೂರಿನಲ್ಲಿ ಈ ರೀತಿ ಇನ್ನು ಎಷ್ಟು ಜನ ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಬಗ್ಗೆಯೂ ತನಿಖೆ ತೀವ್ರಗೊಂಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

