ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್: ತತ್ಕಾಲ್ ಟಿಕೆಟ್ ಬುಕಿಂಗ್ ಇನ್ಮುಂದೆ ರಾಕೆಟ್ ವೇಗ, ಇಷ್ಟದ ಸೀಟ್ ಆಯ್ಕೆಗೂ ಅವಕಾಶ

ದೆಹಲಿ: ರೈಲು ಪ್ರಯಾಣಿಕರು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ವೇಗ ಹಾಗೂ ಸುಲಭಗೊಳಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ತನ್ನ ಹೊಸ ತಂತ್ರಜ್ಞಾನದ ವೆಬ್‌ಸೈಟ್‌ ಅನ್ನು ಇಂದು (ಜುಲೈ 15) ಅಧಿಕೃತವಾಗಿ ಉದ್ಘಾಟಿಸಿದೆ. ವಿಶೇಷವಾಗಿ ತತ್ಕಾಲ್ (Tatkal) ಟಿಕೆಟ್ ಬುಕಿಂಗ್ ಸಮಯದಲ್ಲಿ ಎದುರಾಗುತ್ತಿದ್ದ ಸರ್ವರ್ ಸ್ಲೋ ಸಮಸ್ಯೆ, ಪೇಮೆಂಟ್ ಫೇಲ್ಯೂರ್ (ಹಣ ಕಡಿತಗೊಂಡು ಟಿಕೆಟ್ ಆಗದಿರುವುದು) ಮತ್ತು ತಾಂತ್ರಿಕ ಅಡಚಣೆಗಳಿಗೆ ಈ ಹೊಸ ವೆಬ್‌ಸೈಟ್ ಶಾಶ್ವತ ಬ್ರೇಕ್ ಹಾಕಲಿದೆ.

ನಿಮಿಷಕ್ಕೆ 1.5 ಲಕ್ಷ ಟಿಕೆಟ್ ಬುಕಿಂಗ್

ಹೊಸ ವೆಬ್‌ಸೈಟ್‌ನ ಅತ್ಯಂತ ದೊಡ್ಡ ಬದಲಾವಣೆ ಎಂದರೆ ಅದು ಕೋಟ್ಯಂತರ ಜನರು ಏಕಕಾಲಕ್ಕೆ ಲಾಗಿನ್ ಆದರೂ ಸರ್ವರ್ ಕ್ರ್ಯಾಶ್ ಆಗದಂತೆ ತಡೆದುಕೊಳ್ಳುವ ಭಾರಿ ಸಾಮರ್ಥ್ಯ ಹೊಂದಿದೆ.ಹಳೆಯ ವೆಬ್‌ಸೈಟ್‌ನಲ್ಲಿ ಪ್ರತಿ ನಿಮಿಷಕ್ಕೆ ಕೇವಲ 32,000 ಟಿಕೆಟ್‌ಗಳನ್ನು ಮಾತ್ರ ಬುಕ್ ಮಾಡಬಹುದಿತ್ತು. ಆದರೆ, ಈ ನವೀಕೃತ ವೆಬ್‌ಸೈಟ್ ಇನ್ಮುಂದೆ ಪ್ರತಿ ನಿಮಿಷಕ್ಕೆ 1.5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳನ್ನು ಬುಕ್ ಮಾಡುವ ಸಾಮರ್ಥ್ಯ ಹೊಂದಿದೆ.

ಪ್ರಯಾಣಿಕರ ರಿಸರ್ವೇಶನ್ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಲಾಗಿದ್ದು, ಮೊದಲು ನಿಮಿಷಕ್ಕೆ ಕೇವಲ 4 ಲಕ್ಷ ವಿಚಾರಣೆಗಳನ್ನು ಸ್ವೀಕರಿಸುತ್ತಿದ್ದ ಸರ್ವರ್, ಇನ್ಮುಂದೆ ಏಕಕಾಲಕ್ಕೆ 40 ಲಕ್ಷಕ್ಕೂ ಅಧಿಕ ವಿಚಾರಣೆಗಳನ್ನು ನಿರ್ವಹಿಸಲಿದೆ.

ಹೊಸ ವೆಬ್‌ಸೈಟ್‌ನಲ್ಲಿ ಪ್ರಯಾಣಿಕರಿಗೆ ಸಿಗಲಿರುವ ಅದ್ಭುತ ಫೀಚರ್‌ಗಳು

ಇನ್ಮುಂದೆ ಸಿಸ್ಟಮ್ ಆಟೋಮ್ಯಾಟಿಕ್ ಆಗಿ ನೀಡುವ ಸೀಟ್‌ಗಳ ಮೇಲೆ ಅವಲಂಬಿತರಾಗಬೇಕಿಲ್ಲ. ಟಿಕೆಟ್ ಕಾಯ್ದಿರಿಸುವಾಗಲೇ ಪ್ರಯಾಣಿಕರು ತಮಗೆ ಇಷ್ಟವಾದ ಸೀಟುಗಳನ್ನು ತಾವೇ ಆಯ್ಕೆ ಮಾಡಿಕೊಳ್ಳಬಹುದು. ವೆಬ್‌ಸೈಟ್‌ಗೆ ಹೊಸದಾಗಿ ಫೇರ್ ಕ್ಯಾಲೆಂಡರ್ ಸೇರಿಸಲಾಗಿದೆ. ಪ್ರಯಾಣದ ದಿನಾಂಕಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶ ಇರುವವರು, ವಿವಿಧ ದಿನಗಳ ಟಿಕೆಟ್ ದರಗಳನ್ನು ಹೋಲಿಕೆ ಮಾಡಿ ಕಡಿಮೆ ದರವಿರುವ ದಿನದ ಟಿಕೆಟ್ ಆಯ್ದುಕೊಳ್ಳಬಹುದು.

ಇದನ್ನೂ ಓದಿ: ಹೊಸ ಜೀಪ್ ಎಸ್‌ಯುವಿ ಬಿಡುಗಡೆ ಯಾವಾಗ? AWD ತಂತ್ರಜ್ಞಾನವೇ ಇದರ ಪ್ರಮುಖ ಆಕರ್ಷಣೆ

ಸ್ಲೀಪರ್, ಎಸಿ 3 ಟೈರ್, ಎಸಿ 2 ಟೈರ್ ಹೀಗೆ ಬೇರೆ ಬೇರೆ ಕ್ಲಾಸ್‌ಗಳ ಸೀಟ್ ಲಭ್ಯತೆಯನ್ನು ಪರಿಶೀಲಿಸಲು ಇನ್ಮುಂದೆ ಬೇರೆ ಬೇರೆ ಟ್ಯಾಬ್‌ಗಳನ್ನು ಓಪನ್ ಮಾಡಬೇಕಿಲ್ಲ. ಎಲ್ಲಾ ಕ್ಲಾಸ್‌ಗಳ ಸೀಟ್ ವಿವರ ಒಂದೇ ಸ್ಕ್ರೀನ್‌ನಲ್ಲಿ ಕಾಣಿಸಲಿದೆ. ವಿದ್ಯಾರ್ಥಿಗಳು, ದಿವ್ಯಾಂಗರು ಹಾಗೂ ರೋಗಿಗಳಿಗೆ ಸಿಗುವ ವಿಶೇಷ ಟಿಕೆಟ್ ರಿಯಾಯಿತಿ ವ್ಯವಸ್ಥೆಯನ್ನು ಒಂದೇ ಸೂರಿನಡಿ ತರಲಾಗಿದ್ದು, ಅರ್ಜಿ ಪ್ರಕ್ರಿಯೆ ಸುಲಭವಾಗಿದೆ. ವೆಬ್‌ಸೈಟ್‌ನಲ್ಲಿ ಅನಗತ್ಯವಾಗಿ ಬರುತ್ತಿದ್ದ ಪಾಪ್-ಅಪ್ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಪದೇ ಪದೇ ಬರುತ್ತಿದ್ದ ಕ್ಯಾಪ್ಚಾ ಪರಿಶೀಲನೆಗಳನ್ನು ಕಡಿಮೆ ಮಾಡಲಾಗಿದೆ. ಇದರಿಂದ ಟಿಕೆಟ್ ಬುಕಿಂಗ್ ವೇಗವಾಗಿ ಮುಕ್ತಾಯಗೊಳ್ಳಲಿದೆ.

ಭಾರತೀಯ ರೈಲ್ವೆಯ ಒಟ್ಟಾರೆ ಡಿಜಿಟಲ್ ಮೂಲಸೌಕರ್ಯ ಮೇಲ್ದರ್ಜೀಕರಣದ ಭಾಗವಾಗಿ ಈ ಹೊಸ ತಂತ್ರಜ್ಞಾನವನ್ನು ತರಲಾಗಿದ್ದು, ಇನ್ಮುಂದೆ ಹಬ್ಬ ಹಾಗೂ ರಜಾದಿನಗಳ ಭಾರಿ ರಶ್ ಸಮಯದಲ್ಲಿಯೂ ಸಾರ್ವಜನಿಕರು ನೆಮ್ಮದಿಯಿಂದ ಟಿಕೆಟ್ ಬುಕ್ ಮಾಡಬಹುದಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Leave a Reply

Your email address will not be published. Required fields are marked *