ವಿನೀತ್ ಕುಮಾರ್ ಹೀರೋ ಆಗಿ ನಟಿಸಿರುವ ‘ಮ್ಯಾರೇಜ್ ಪಾರ್ಟಿ’ ಫಸ್ಟ್ ಲುಕ್ ಪೋಸ್ಟರ್ ಔಟ್

ಬೆಂಗಳೂರು: ಕರಾವಳಿ ಭಾಗದ ವಿಭಿನ್ನ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸುಂದರ ಕಥೆಗಳು ಇತ್ತೀಚಿನ ವರ್ಷಗಳಲ್ಲಿ ಗಾಂಧಿನಗರದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿವೆ. ಇತ್ತೀಚೆಗಷ್ಟೇ ತೆರೆಕಂಡು ಪ್ರೇಕ್ಷಕರ ಮನಗೆದ್ದ ‘ಸು ಫ್ರಂ ಸೋ’ (Su From So) ಹಾಗೂ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ‘ಕಾಂತಾರ’ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಇದೀಗ ಇದೇ ಹಾದಿಯಲ್ಲಿ ಕರಾವಳಿಯ ವಿಶಿಷ್ಟ ಕಥಾಹಂದರ ಹೊತ್ತ ಹೊಸದೊಂದು ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆ ಚಿತ್ರವೇ ‘ಮ್ಯಾರೇಜ್ ಪಾರ್ಟಿ’ (Marriage Party).

ಈ ಬಹುನಿರೀಕ್ಷಿತ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಚಾಲನೆ ನೀಡಿದ್ದು, ಪ್ರಥಮ ಹೆಜ್ಜೆಯಾಗಿ ಇತ್ತೀಚೆಗೆ ಈ ಚಿತ್ರದ ಆಕರ್ಷಕ ‘ಫಸ್ಟ್ ಲುಕ್ ಪೋಸ್ಟರ್’ ಬಿಡುಗಡೆ ಮಾಡಿ ಸಿನಿರಸರಲ್ಲಿ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಈ ಸಿನಿಮಾ ಏಕಕಾಲದಲ್ಲಿ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕರಾಗಿ ನಟಿಸಿದ್ದ ‘ಅಧಿಪತ್ರ’ ಚಿತ್ರವನ್ನು ನಿರ್ದೇಶಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದ ಯುವ ನಿರ್ದೇಶಕ ಚಯನ್ ಶೆಟ್ಟಿ ಅವರು ಈಗ ‘ಮ್ಯಾರೇಜ್ ಪಾರ್ಟಿ’ಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಇವರ ನಿರ್ದೇಶನದ ಎರಡನೇ ಸಿನಿಮಾವಾಗಿದೆ. ಮೊದಲ ಚಿತ್ರದಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದ ಚಯನ್ ಶೆಟ್ಟಿ, ಈ ಬಾರಿ ಕರಾವಳಿ ಶೈಲಿಯ ಔಟ್ ಆಂಡ್ ಔಟ್ ಕಾಮಿಡಿ ಕಹಾನಿಯೊಂದಿಗೆ ಪ್ರೇಕ್ಷಕರನ್ನು ನಗಿಸಲು ಬರುತ್ತಿದ್ದಾರೆ.

ಈ ಹೊಸ ಮದುವೆಯ ರಸದೌತಣದ ಸಿನಿಮಾವನ್ನು ‘ಶ್ರೀ ವಾರಾಹಿ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಸಂತೋಷ್ ವಿ. ಅವರು ಅತ್ಯಂತ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ತುಳು ಚಿತ್ರರಂಗದಲ್ಲಿ ಪೋಷಕ ಪಾತ್ರ ಹಾಗೂ ಹಾಸ್ಯ ನಟನಾಗಿ ಪ್ರೇಕ್ಷಕರನ್ನು ರಂಜಿಸಿದ್ದ ಕರಾವಳಿಯ ಪ್ರತಿಭೆ ವಿನೀತ್ ಕುಮಾರ್ ಅವರು ಈ ಚಿತ್ರದ ಮೂಲಕ ನಾಯಕ ನಟನಾಗಿ ಪ್ರಮುಖ ಬಡ್ತಿ ಪಡೆದಿದ್ದಾರೆ. ಕರಾವಳಿ ಭಾಗದಲ್ಲಿ ನಡೆಯುವ ಅತ್ಯಂತ ಸ್ವಾರಸ್ಯಕರ ಹಾಗೂ ರಸವತ್ತಾದ ಪ್ರಸಂಗಗಳನ್ನು ಇಟ್ಟುಕೊಂಡು ಪೂರ್ಣ ಪ್ರಮಾಣದ ಫ್ಯಾಮಿಲಿ ಎಂಟರ್‌ಟೈನರ್ ಹಾಗೂ ಹಾಸ್ಯಪ್ರಧಾನ ಶೈಲಿಯಲ್ಲಿ ‘ಮ್ಯಾರೇಜ್ ಪಾರ್ಟಿ’ ಸಿನಿಮಾವನ್ನು ರೂಪಿಸಲಾಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಕನ್’ ರಿಲೀಸ್ ಡೇಟ್ ಫಿಕ್ಸ್: ಸೆನ್ಸಾರ್ ಮಂಡಳಿಯಿಂದ 12 ಕಟ್‌ಗಳೊಂದಿಗೆ ‘A’ ಪ್ರಮಾಣಪತ್ರ

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *