ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕದ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ನೆಲ್ಲಿಕಟ್ಟೆಯ ಮಾತೃಛಾಯಾ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಭಾಷಣದಲ್ಲಿ ಅವರು, ಹಿಂದಿನ ದಿನಗಳಲ್ಲಿ ಪತ್ರಿಕೆಗಳೇ ಜನರ ಪ್ರಮುಖ ಮಾಹಿತಿ ಮಾಧ್ಯಮವಾಗಿದ್ದವು. ಇಂದು ಡಿಜಿಟಲ್ ಮಾಧ್ಯಮಗಳ ಪ್ರಭಾವ ಹೆಚ್ಚಿದ್ದರೂ ಪತ್ರಿಕೆಗಳ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿಲ್ಲ. ವಿಶೇಷವಾಗಿ ಹಿರಿಯರು ಪತ್ರಿಕೆ ಓದದೇ ದಿನ ಆರಂಭಿಸುವುದಿಲ್ಲ. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು, ಜೀರ್ಣೋದ್ಧಾರ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಭಕ್ತರಿಗೆ ತಲುಪಿಸುವಲ್ಲಿ ಪತ್ರಕರ್ತರು ಮತ್ತು ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ ಎಂದು ಹೇಳಿದರು.
ಇದನ್ನೂ ಓದಿ: ಎಲೆ ಚುಕ್ಕಿ ಸೇರಿದಂತೆ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ಕ್ಯಾ.ಬ್ರಿಜೇಶ್ ಚೌಟ
ಪತ್ರಕರ್ತರು ಸತ್ಯನಿಷ್ಠೆ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ಸಮಾಜದಲ್ಲಿ ಹೆಚ್ಚಿನ ಗೌರವ ಲಭಿಸುತ್ತದೆ ಎಂದ ಅವರು, ಉದ್ಯಮಿ ಕೇಶವ ಅಮೈ ಹಾಗೂ ಹಿರಿಯ ಪತ್ರಕರ್ತ ಜಯರಾಮ್ ಭಟ್ ಸಂಪಾಜೆ ಅವರನ್ನು ಸಂಘ ಸನ್ಮಾನಿಸಿರುವುದನ್ನು ಶ್ಲಾಘಿಸಿದರು. ಕೇಶವ ಅಮೈ ಅವರ ಕೃಷಿ ಸಲಕರಣೆಗಳು ಕರಾವಳಿಯ ಅಡಿಕೆ ಬೆಳೆಗಾರರಿಗೆ ಉಪಯುಕ್ತವಾಗಿದ್ದು, ಜಯರಾಮ್ ಭಟ್ ಅವರು ಸಾಮಾಜಿಕ ಕಾಳಜಿಯ ವರದಿಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಸುಧಾಕರ ಸುವರ್ಣ, ಕರ್ನಾಟಕ ಪತ್ರಕರ್ತರ ಸಂಘದಲ್ಲಿ ಉತ್ತಮ ಕೌಟುಂಬಿಕ ವಾತಾವರಣವಿದ್ದು, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ಭಾಗದ ಪತ್ರಕರ್ತರಿಗೆ ಸುದ್ದಿ ಬಿಡುಗಡೆ ಪ್ರಮುಖ ಆಧಾರಸ್ತಂಭವಾಗಿದೆ ಎಂದರು.
ಪತ್ರಿಕೋದ್ಯಮದಲ್ಲಿ ಹೊಸ ತಂತ್ರಜ್ಞಾನಗಳು ನಿರಂತರವಾಗಿ ಸೇರ್ಪಡೆಯಾಗುತ್ತಿದ್ದು, ಕೃತಕ ಬುದ್ಧಿಮತ್ತೆ (ಎಐ) ಮಾಧ್ಯಮ ಕ್ಷೇತ್ರದ ಮೇಲೆ ಪ್ರಭಾವ ಬೀರುತ್ತಿದೆ. ಆದರೆ ಎಐ ಬಂದರೂ ಪತ್ರಿಕೆಗಳ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಇಂದಿಗೂ ಜನರು ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳನ್ನೇ ಹೆಚ್ಚು ವಿಶ್ವಾಸದಿಂದ ಸ್ವೀಕರಿಸುತ್ತಾರೆ. ಪತ್ರಕರ್ತರು ಯಾವುದೇ ವ್ಯವಸ್ಥೆಯ ಪರವಾಗಿ ನಿಲ್ಲದೆ, ಸಮಾಜದ ಪರವಾಗಿ ಪ್ರಶ್ನಿಸುವ ವಿರೋಧ ಪಕ್ಷದ ಪಾತ್ರವನ್ನು ನಿರಂತರವಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಸಮಾಜದಲ್ಲಿ ನ್ಯಾಯಾಧೀಶರು, ಪೊಲೀಸರು ಹಾಗೂ ಅಧಿಕಾರಿಗಳ ಸಾಲಿನಲ್ಲಿ ಪತ್ರಕರ್ತರಿಗೂ ಗೌರವದ ಸ್ಥಾನವಿದೆ. ಆದ್ದರಿಂದ ಸಮಾಜ ನಮ್ಮನ್ನು ಹೇಗೆ ನೋಡುತ್ತಿದೆ ಎಂಬುದರ ಆತ್ಮಾವಲೋಕನ ಅಗತ್ಯವಾಗಿದೆ. ಇಂದಿನ ದಿನಗಳಲ್ಲಿ ಮಾಧ್ಯಮ ಸಂಸ್ಥೆಗಳು ಉದ್ಯಮಗಳಾಗಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆದಾಯದ ಮೂಲಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಹಳೆಯ ಓದುಗರನ್ನು ಉಳಿಸಿಕೊಳ್ಳುವುದು ಮತ್ತು ಹೊಸ ಓದುಗರನ್ನು ಸೆಳೆಯುವುದು ಪತ್ರಿಕಾ ಮಾಧ್ಯಮಗಳ ಮುಂದಿರುವ ದೊಡ್ಡ ಸವಾಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಅಡಿಕೆ ಬೆಳೆಗಾರರಿಗೆ ಅನ್ಯಾಯ: 16 ರೂ. ಪರಿಹಾರ ಘೋಷಣೆ ಖಂಡಿಸಿದ ಆರ್. ಅಶೋಕ
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸುದ್ದಿ ಬಿಡುಗಡೆ ಪುತ್ತೂರು ಸಿಇಒ ಸೃಜನ್ ಊರುಬೈಲು ಮಾತನಾಡಿ, ಸುದ್ದಿ ಬಿಡುಗಡೆ ತನ್ನ ಪತ್ರಕರ್ತರಷ್ಟೇ ಅಲ್ಲದೆ ಇತರ ಮಾಧ್ಯಮಗಳ ಪತ್ರಕರ್ತರಿಗೂ ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿ, ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಮಾತನಾಡಿ, ಕರ್ನಾಟಕ ಪತ್ರಕರ್ತರ ಸಂಘ ಮತ್ತು ಕಾರ್ಯನಿರತ ಪತ್ರಕರ್ತರ ಸಂಘಗಳ ನಡುವೆ ಉತ್ತಮ ಬಾಂಧವ್ಯವಿದೆ. ಪತ್ರಕರ್ತರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಸಂಘ ಸ್ಥಾಪನೆಯಾಗಿದ್ದು, ಅಪಘಾತ ವಿಮೆ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಪುತ್ತೂರು ಘಟಕವು ಕಳೆದ ಎಂಟು ವರ್ಷಗಳಲ್ಲಿ ಎಂಟು ಅಧ್ಯಕ್ಷರ ನೇತೃತ್ವದಲ್ಲಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಮುಂದಿನ ದಿನಗಳಲ್ಲಿಯೂ ಸಾಮಾಜಿಕ ಬದ್ಧತೆಯ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಸಂಘದ ಕಾನೂನು ಸಲಹೆಗಾರ ಹಾಗೂ ಅನಿಕೇತನ ಲಾ ಚೇಂಬರ್ಸ್‌ನ ಕೃಷ್ಣ ಪ್ರಸಾದ್ ನಡ್ಸಾರ್ ಮಾತನಾಡಿ, ಸಂಘಟನೆ ನಾಯಕತ್ವ ಬೆಳೆಸುವ ಉತ್ತಮ ವೇದಿಕೆಯಾಗಿದೆ. ಪ್ರತಿವರ್ಷ ಹೊಸ ನಾಯಕತ್ವ ಮೂಡಿ ಬರುತ್ತಿರುವುದು ಸಂತಸದ ಸಂಗತಿ. ಅಂತರ್ಜಾಲ ಉತ್ತಮ ಕಾರ್ಯಗಳಿಗೆ ಸಹಕಾರಿಯಾಗಿದ್ದರೂ ಅದರ ದುರುಪಯೋಗ ಅಪಾಯಕ್ಕೂ ಕಾರಣವಾಗಬಹುದು. ಆದ್ದರಿಂದ ಜವಾಬ್ದಾರಿಯಿಂದ ಬಳಸುವ ಅಗತ್ಯವಿದೆ ಎಂದು ಹೇಳಿದರು.
ಪದಗ್ರಹಣದ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಶರತ್ ಕುಮಾರ್ ಪಾರ, ಸಂಘದ ವತಿಯಿಂದ ಕಾನೂನು ಸಲಹೆ, ವೈದ್ಯಕೀಯ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಆರ್ಥಿಕ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿ ಸದಸ್ಯರ ಸಹಕಾರ ಕೋರಿದರು. ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸಮಾಜದ ಮಾನಸಿಕ ಹಾಗೂ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪುತ್ತೂರು ಘಟಕದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ಪತ್ರಕರ್ತರ ವಿರುದ್ಧ ನಡೆಯುತ್ತಿದ್ದ ಅಪಪ್ರಚಾರ ಹಾಗೂ ನೈತಿಕ ಭದ್ರತೆಯ ಅಗತ್ಯವನ್ನು ಮನಗಂಡು 2019ರಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ಘಟಕವನ್ನು ಸ್ಥಾಪಿಸಲಾಯಿತು. ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಅವರ ಸಹಕಾರದೊಂದಿಗೆ ಆರಂಭವಾದ ಸಂಘದಲ್ಲಿ ಪತ್ರಿಕಾ ಕ್ಷೇತ್ರದ ಎಲ್ಲ ವಿಭಾಗಗಳ ಸಿಬ್ಬಂದಿಯನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಸಂಘದ ಮೂಲಕ ವೈದ್ಯಕೀಯ ಶಿಬಿರಗಳು, ವಿಶೇಷ ಚೇತನರ ಆಶ್ರಮಗಳಿಗೆ ನೆರವು ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‌ಆರ್‌ಕೆ ಲ್ಯಾಡರ್ಸ್ ಸಂಸ್ಥಾಪಕ ಕೇಶವ ಅಮೈ ಹಾಗೂ ಸುದ್ದಿ ಬಿಡುಗಡೆ ಪ್ರಸರಣ ವಿಭಾಗದ ನಿವೃತ್ತ ಮುಖ್ಯಸ್ಥ ಜಯರಾಮ್ ಭಟ್ ಸಂಪಾಜೆ ಅವರನ್ನು ಸನ್ಮಾನಿಸಲಾಯಿತು. ಸಂಘದ ನೂತನ ಸದಸ್ಯರಾದ ಕವಿತಾ ಮಾಣಿ (ವಿ4 ನ್ಯೂಸ್), ಸಂದೀಪ್ (ಡೇ ಟುಡೇ ನ್ಯೂಸ್) ಹಾಗೂ ಭರತ್ ಶಾಂತಿನಗರ (ಸುದ್ದಿ ಬಿಡುಗಡೆ) ಅವರನ್ನು ಹೂಗುಚ್ಛ ನೀಡಿ ಸಂಘಕ್ಕೆ ಬರಮಾಡಿಕೊಳ್ಳಲಾಯಿತು.
ಪದಪ್ರದಾನ

ನೂತನ ಅಧ್ಯಕ್ಷ ಶರತ್ ಕುಮಾರ್ ಪಾರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಉರ್ಲಾಂಡಿ, ಕೋಶಾಧಿಕಾರಿ ಚಿತ್ರಾಂಗಿನಿ ಸತ್ಯಪ್ರಕಾಶ್, ಉಪಾಧ್ಯಕ್ಷೆ ಸುಮಿತ್ರ ಬಿ. ನಾಯ್ಕ್, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಮಿತ್ತಡ್ಕ ಹಾಗೂ ಜತೆ ಕಾರ್ಯದರ್ಶಿ ದಿನೇಶ್ ಬಡಗನ್ನೂರು ಅವರಿಗೆ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಶಾಲು ಹೊದಿಸಿ, ಹೂಗುಚ್ಛ ನೀಡಿ ಪದಪ್ರದಾನ ಮಾಡಿದರು.
ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ
ಸುದ್ದಿ ಸಮೂಹ ಸಂಸ್ಥೆಗಳ ಲಂಚ ಮತ್ತು ಭ್ರಷ್ಟಾಚಾರ ವಿರೋಧಿ ಜನಾಂದೋಲನದ ಅಂಗವಾಗಿ ಕಾರ್ಯಕ್ರಮದಲ್ಲಿ ಜಾಗೃತಿ ಫಲಕ ಅನಾವರಣಗೊಳಿಸಿ, ಭ್ರಷ್ಟಾಚಾರ ನಿರ್ಮೂಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿ ಶೋಭಾ ಶಿವಾನಂದ, ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಲಕ್ಷ್ಮೀ ಪ್ರಸಾದ್ ಬೆಟ್ಟ, ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ಪುತ್ತೂರು ಕೆಸಿಡಿಸಿ ಅಧೀಕ್ಷಕ ರವಿಪ್ರಸಾದ್, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ, ಸದಸ್ಯರಾದ ಮೇಘ ಪಾಲೆತ್ತಡಿ, ನಝೀರ್ ಕೊಯಿಲ, ಅನೀಶ್ ಮರಿಲ್, ಉಮಾಪ್ರಸಾದ್ ರೈ ನಡುಬೈಲು, ಲೋಕೇಶ್ ಬನ್ನೂರು, ಗಣೇಶ್ ಕಲ್ಲರ್ಪೆ, ಯತೀಶ್ ಉಪ್ಪಳಿಗೆ, ವಸಂತ ಸಾಮೆತಡ್ಕ, ಕಡಬ ಮತ್ತು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಸುದ್ದಿ ಸೌಹಾರ್ದ ಸಹಕಾರಿ ಸಂಘದ ನಿವೃತ್ತ ಸಿಇಒ ನರೇಂದ್ರ ಎಂ., ಸಿಇಒ ಶಿವಪ್ರಸಾದ್ ತಲೆಪ್ಪಾಡಿ, ವ್ಯವಸ್ಥಾಪಕ ಗಣೇಶ್, ಸಿಬ್ಬಂದಿ, ಕರ್ನಾಟಕ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸಂಘದ ಕೋಶಾಧಿಕಾರಿ ಚಿತ್ರಾಂಗಿನಿ ಮತ್ತು ಸದಸ್ಯೆ ರಕ್ಷಿತಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಉರ್ಲಾಂಡಿ ವಂದಿಸಿದರು. ಸಂಘದ ಸದಸ್ಯ ಹರಿಪ್ರಸಾದ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

