ಸಿಲಿಂಡರ್ ಸೋರಿಕೆಯಿಂದ ಸ್ಫೋಟ, 8ಕ್ಕೂ ಹೆಚ್ಚು ಕಾರ್ಮಿಕರಿಗೆ ಗಂಭೀರ ಗಾಯ

ಆನೇಕಲ್ : ಬೆಂಗಳೂರು ನಗರದ ಹೊರವಲಯದ ಬೊಮ್ಮಸಂದ್ರದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ 8ಕ್ಕೂ ಹೆಚ್ಚು ಕಾರ್ಮಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ತಂಗಿದ್ದ ಕಟ್ಟಡದಲ್ಲಿ ಇಂದು ಬೆಳಿಗ್ಗೆ ಸುಮಾರು ೬:೦೦ ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದೆ. ಬುಧವಾರ ರಾತ್ರಿಯೇ ಕೊಠಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು ಎನ್ನಲಾಗಿದೆ. ಇದನ್ನು ಗಮನಿಸದ ಕಾರ್ಮಿಕರು, ಬೆಳಿಗ್ಗೆ ಎದ್ದು ಬೆಳಕಿಗಾಗಿ ಲೈಟ್ ಸ್ವಿಚ್ ಹಾಕಿದ ಕ್ಷಣಾರ್ಧದಲ್ಲಿ ವಿದ್ಯುತ್ ಸಂಚಾರದಿಂದ ಇಡೀ ಕೊಠಡಿಯಲ್ಲಿ ಗ್ಯಾಸ್ ಧಗಧಗನೆ ಉರಿದು ಸ್ಫೋಟಗೊಂಡಿದೆ.

ಇದನ್ನೂ ಓದಿ: ದೆಹಲಿಯಲ್ಲಿ ದೌರ್ಜನ್ಯ, ಬೆಂಗಳೂರಿನಲ್ಲಿ ನಕಲಿ ನಾಟಕ: ಬಿಜೆಪಿ ವಿರುದ್ಧ ಬಿ. ಕೆ. ಹರಿಪ್ರಸಾದ್ ಆಕ್ರೋಶ

ಈ ಧಮಾಕದ ರಭಸಕ್ಕೆ ಕಟ್ಟಡದ ಬಾಗಿಲುಗಳು, ಕಿಟಕಿಗಳು ಚೂರಾಗಿದ್ದು, ಕೊಠಡಿಯಲ್ಲಿದ್ದ ಗೃಹಬಳಕೆಯ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಸ್ಫೋಟದ ತೀವ್ರತೆಗೆ ತೀವ್ರವಾಗಿ ಗಾಯಗೊಂಡಿರುವ ೮ಕ್ಕೂ ಹೆಚ್ಚು ಕಾರ್ಮಿಕರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸೇರಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *