ನಂದಿನಿ ಪ್ರಿಯರಿಗೆ ಮತ್ತೆ ಬೆಲೆ ಏರಿಕೆ ಶಾಕ್: ತುಪ್ಪ, ಬೆಣ್ಣೆ ದರ ದಿಢೀರ್ ಹೆಚ್ಚಳ

ಬೆಂಗಳೂರು: ಸ್ವಲ್ಪ ದಿನಗಳ ಹಿಂದಷ್ಟೇ ನಂದಿನಿ ಉತ್ಪನ್ನಗಳ ದರವನ್ನು ಇಳಿಕೆ ಮಾಡಿ ಸಾರ್ವಜನಿಕರಿಗೆ ಸಿಹಿ ಸುದ್ದಿ ನೀಡಿದ್ದ ಕರ್ನಾಟಕ ಹಾಲು ಮಹಾಮಂಡಳವು (KMF), ಇದೀಗ ದಿಢೀರ್ ಆಗಿ ನಂದಿನಿ ತುಪ್ಪ ಹಾಗೂ ಬೆಣ್ಣೆ ದರವನ್ನು ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಪರಿಷ್ಕೃತ ಹೊಸ ದರಗಳು ಜುಲೈ 24ರಿಂದ (ಇಂದಿನಿಂದ) ಅಧಿಕೃತವಾಗಿ ಜಾರಿಗೆ ಬರಲಿದ್ದು, ಸಾರ್ವಜನಿಕರ ಜೇಬಿಗೆ ಮತ್ತೊಮ್ಮೆ ಕತ್ತರಿ ಬೀಳಲಿದೆ.

1 ಕೆಜಿ ತುಪ್ಪದ ದರದಲ್ಲಿ 15 ರೂ. ಹೆಚ್ಚಳವಾಗಿದ್ದು, 700 ರೂ ಇದ್ದ ದರ ಇದೀಗ 715 ರೂ.ಗೆ ಏರಿಕೆಯಾಗಿದೆ. 1 ಕೆಜಿ ಬೆಣ್ಣೆಯ ದರದಲ್ಲಿ ಬರೋಬ್ಬರಿ 22 ರೂ (ಬೆಣ್ಣೆ ಕೆಜಿಗೆ 610 ರೂ. ರಿಂದ 660 ರೂ.ಗೆ ಏರಿಕೆ) ಹೆಚ್ಚಳ ಮಾಡಲಾಗಿದೆ. ನಂದಿನಿ ತುಪ್ಪ ಮತ್ತು ಬೆಣ್ಣೆಯ ದರ ದಿಢೀರ್ ಏರಿಕೆಯಾಗಿರುವುದರಿಂದ ಸಾಮಾನ್ಯ ಗೃಹಬಳಕೆದಾರರ ಜೊತೆಗೆ ಹೋಟೆಲ್ ಹಾಗೂ ಬೇಕರಿ ಉದ್ಯಮದ ಮೇಲೆಯೂ ಇದು ತೀವ್ರ ಪರಿಣಾಮ ಬೀರಲಿದೆ. ಪರಿಣಾಮವಾಗಿ, ತುಪ್ಪ ಮತ್ತು ಬೆಣ್ಣೆಯನ್ನು ಬಳಸಿ ತಯಾರಿಸುವ ತಿಂಡಿ ಹಾಗೂ ಸಿಹಿ ಪದಾರ್ಥಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಸೇಡಿಯಾಪಿನ ಕಾಪು ಬಳಿ ಟಾಟಾ ಏಸ್ ಪಲ್ಟಿ; 12 ವರ್ಷದ ಬಾಲಕ ಆಸ್ಪತ್ರೆಗೆ ದಾಖಲು

ಈ ಹಿಂದೆ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (GST) ಕಡಿತಗೊಳಿಸಿದಾಗ ಕೆಎಂಎಫ್ ನಂದಿನಿ ಉತ್ಪನ್ನಗಳ ದರವನ್ನು ಶೇ. 7ರಷ್ಟು ಇಳಿಸಿತ್ತು. ಆದರೆ, ಕಳೆದ ವರ್ಷದ ನವೆಂಬರ್‌ನಲ್ಲಿ ಶೇ. 15ರಷ್ಟು ತುಪ್ಪ ಹಾಗೂ ಶೇ. 6ರಷ್ಟು ಬೆಣ್ಣೆ ದರವನ್ನು ಏರಿಕೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ದರ ಹೆಚ್ಚಳ ಮಾಡಿರುವುದು ಗ್ರಾಹಕರಲ್ಲಿ ಅಸಮಾಧಾನ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *