“ಹುಟ್ಟುತ್ತಾ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು” ಎಂಬ ಮಾತು ಇಂದಿನ ಸ್ವಾರ್ಥ ಜಗತ್ತಿಗೆ ಅನ್ವಯಿಸಬಹುದು. ಆದರೆ, ಆಸ್ತಿ, ಹಣ ಮತ್ತು ಬಂಗಾರದ ಮೋಹಕ್ಕೆ ಬಿದ್ದು ಒಡಹುಟ್ಟಿದ ಬಾಂಧವ್ಯಗಳೇ ಕಳಚಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ, ಅಪರೂಪದ ಹಾಗೂ ಕಣ್ಣೀರು ತರಿಸುವ ಹೃದಯಸ್ಪರ್ಶಿ ಘಟನೆಯೊಂದಕ್ಕೆ ಉತ್ತರ ಕನ್ನಡ ಅಸಮೀಪದ ಕಿಲಾರ ಗ್ರಾಮ ಸಾಕ್ಷಿಯಾಗಿದೆ.
ಸುಮಾರು 90 ವರ್ಷ ವಯಸ್ಸಿನ ನೀಲಮ್ಮ ಎಂಬ ವೃದ್ಧೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಆಕೆಯ ಪ್ರೀತಿಯ ತಮ್ಮ ಈರಜ್ಜ ಪಕ್ಕದ ಹಕ್ಕಲಮನೆಯಲ್ಲಿ ನೆಲೆಸಿದ್ದಾರೆ. ದುರದೃಷ್ಟವಶಾತ್, ಈರಜ್ಜ ಅವರಿಗೂ ಗ್ಯಾಂಗ್ರಿನ್ ಕಾಯಿಲೆಯಿಂದಾಗಿ ಒಂದು ಕಾಲನ್ನು ತೆಗೆಯಲಾಗಿದ್ದು, ಜೊತೆಗೆ ಹೃದಯ ಶಸ್ತ್ರಚಿಕಿತ್ಸೆಯೂ ಆಗಿದೆ. ಮನೆಯಲ್ಲಿ ಎದ್ದು ಓಡಾಡುವುದಕ್ಕೂ ಸಾಧ್ಯವಾಗದ ಶೋಚನೀಯ ಸ್ಥಿತಿಯಲ್ಲಿ ಅವರಿದ್ದಾರೆ.
ತನ್ನ ಅಕ್ಕ ಇಹಲೋಕ ತ್ಯಜಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಈರಜ್ಜ ಮನೆಯಲ್ಲಿ ಕಣ್ಣೀರಿಡಲು ಪ್ರಾರಂಭಿಸಿದರು. “ನನಗೆ ಜನ್ಮ ನೀಡಿದ ತಾಯಿಯಂತಿದ್ದ ಅಕ್ಕನನ್ನು ಕೊನೆಯ ಬಾರಿಗೆ ಒಮ್ಮೆ ಕಣ್ಣುಂಬಿಕೊಂಡು ಬರುತ್ತೇನೆ” ಎಂದು ಮಗನ ಬಳಿ ಹಠ ಹಿಡಿದು ಗೋಗರೆದರು. ಅಪ್ಪನ ಪರಿಸ್ಥಿತಿ ಕಂಡು ಮಗನಿಗೆ ಅವರನ್ನು ಕರೆದುಕೊಂಡು ಹೋಗುವುದೇ ದೊಡ್ಡ ಚಿಂತೆಯಾಯಿತು. ಕೊನೆಗೆ ಗ್ರಾಮದ ಶ್ರೀಕಾಂತ್ ಎಂಬುವವರ ಸಹಾಯದಿಂದ ಬೈಕ್‌ನಲ್ಲಿ ಈರಜ್ಜ ಅವರನ್ನು ಅತ್ಯಂತ ಜಾಗರೂಕತೆಯಿಂದ ಕರೆತರಲಾಯಿತು.
ದೇಹದ ಅಸಹಕಾರದಿಂದಾಗಿ ಬೈಕ್‌ನಿಂದ ಕೆಳಗಿಳಿಯಲು ಸಹ ಸಾಧ್ಯವಾಗದ ಈರಜ್ಜ, ಕುಳಿತಲ್ಲಿಂದಲೇ ಅಕ್ಕನ ಪಾರ್ಥಿವ ಶರೀರವನ್ನು ಕಂಡು ಕಣ್ಣೀರು ಸುರಿಸಿದರು. ಅಕ್ಕನಿಗೆ ಪೂಜೆ ಸಲ್ಲಿಸಿ, ಅಕ್ಕಿ ಹಾಕಿ, ಕೊನೆಯದಾಗಿ ತವರಿನ ಉಡುಗೊರೆಯಾಗಿ ‘ಸೀರೆ’ಯನ್ನು ಸಮರ್ಪಿಸಿದರು. “ಅಕ್ಕ… ಹೋಗಿ ಬಾ…” ಎಂದು ಕೈಮುಗಿದು ಅಂತಿಮ ಬೀಳ್ಕೊಡುಗೆ ನೀಡಿದಾಗ, ಅಲ್ಲಿದ್ದ ಸಂಬಂಧಿಕರು ಹಾಗೂ ಗ್ರಾಮಸ್ಥರ ಕಣ್ಣುಗಳು ತೇವಗೊಂಡವು.
ಇದನ್ನೂ ಓದಿ: ಅಂಕೋಲಾದಲ್ಲಿ ಮಾನವೀಯತೆ ಮೆರೆದ ಯುವಕರು: ಮೀನಿನ ಬಲೆಗೆ ಸಿಲುಕಿದ್ದ ಕಡಲಾಮೆಗೆ ಮರುಜೀವ!
ಈ ವಯಸ್ಸಿನಲ್ಲೂ ಅಕ್ಕ-ತಮ್ಮಂದಿರು ಇಷ್ಟೊಂದು ಅನ್ಯೋನ್ಯವಾಗಿದ್ದುದನ್ನು ಕಂಡ ಜನ, ಇಬ್ಬರ ಭಾಗ್ಯವನ್ನು ಮೆಚ್ಚಿಕೊಂಡರು. ಜೊತೆಗೆ, ತಂದೆ-ತಾಯಿಯ ಆಸೆಗೆ ಸ್ಪಂದಿಸಿ, ಇಳಿವಯಸ್ಸಿನಲ್ಲೂ ಅವರನ್ನು ಅತ್ಯಂತ ಪ್ರೀತಿ-ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಅವರ ಮಕ್ಕಳ ನಡೆ ಎಲ್ಲರಿಗೂ ಮಾದರಿಯಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

