ಡಿ.ಜೆ.ಹಳ್ಳಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯದಲ್ಲಿದ್ದ ಸರ್ಕಾರಿ ಅಧಿಕಾರಿಯ ಮೇಲೆ ಭೀಕರ ಹಲ್ಲೆ

ಬೆಂಗಳೂರು: ರಾಜಧಾನಿಯ ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಕರ್ತವ್ಯದ ಮೇಲ್ವಿಚಾರಣೆ ನಡೆಸುತ್ತಿದ್ದ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಜುಲೈ 29ರ ಬುಧವಾರ ಮಧ್ಯಾಹ್ನ ಯುವಕರಿಬ್ಬರು ಭೀಕರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಕರ್ನಾಟಕ ಸ್ಲಂ ಅಭಿವೃದ್ಧಿ ಮಂಡಳಿಯ ಸೂಪರಿಂಟೆಂಡೆಂಟ್ ಹಾಗೂ ಎಸ್‌ಐಆರ್ ಮೇಲ್ವಿಚಾರಣಾ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ಫಕೀರಪ್ಪ (37) ಹಲ್ಲೆಗೊಳಗಾದ ಅಧಿಕಾರಿ.

ಬುಧವಾರ ಮಧ್ಯಾಹ್ನ ಸುಮಾರು 1:30 ರ ವೇಳೆಗೆ ಡಿ.ಜೆ. ಹಳ್ಳಿಯ ರೋಶನ್ ನಗರದ ಕೌಸರ್ ಮಸೀದಿ ಬಳಿ ಅಧಿಕಾರಿಗಳ ತಂಡ ಎಸ್‌ಐಆರ್ ಪರಿಶೀಲನಾ ಕಾರ್ಯದಲ್ಲಿ ತೊಡಗಿತ್ತು. ಈ ವೇಳೆ ದಸ್ತಗೀರ್ ಮತ್ತು ಯಾರಬ್ ಎಂಬ ಇಬ್ಬರು ಯುವಕರು ಬೂತ್ ಮಟ್ಟದ ಅಧಿಕಾರಿಯ (BLO) ಬಳಿ ಎಸ್‌ಐಆರ್ ಫಾರ್ಮ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಅವರು ಈಗಾಗಲೇ ಜಯನಗರದಲ್ಲಿ ವಾಸವಿರುವುದಾಗಿ ತಿಳಿಸಿದ್ದರಿಂದ, ಅವರ ಆ ವ್ಯಾಪ್ತಿಯಲ್ಲೇ ಫಾರ್ಮ್ ಪಡೆದುಕೊಳ್ಳುವಂತೆ ಬಿಎಲ್‌ಒ ತಿಳಿಸಿದ್ದಾರೆ.

ಈ ವೇಳೆ ಯುವಕರು ಜಗಳ ತೆಗೆದಾಗ, ಮಧ್ಯಪ್ರವೇಶಿಸಿ ಪ್ರಶ್ನಿಸಿದ ಮೇಲ್ವಿಚಾರಕ ಫಕೀರಪ್ಪ ಅವರ ಮೇಲೆ ಯುವಕರು ಮುಖ ಹಾಗೂ ಕಣ್ಣಿನ ಭಾಗಕ್ಕೆ ಬಲವಾಗಿ ಹೂಡೆದಿದ್ದಾರೆ. ಇದರಿಂದ ಅಧಿಕಾರಿಯ ತುಟಿ ಹರಿದು ತೀವ್ರ ರಕ್ತಸ್ರಾವ ಸಂಭವಿಸಿದೆ.

ಇದನ್ನೂ ಓದಿ: ‘ಆರ್‌ಎಸ್‌ಎಸ್‌ಗೆ ಸೇರಿ, ದೇಶಪ್ರೇಮ ಕಲಿಯಿರಿ’: ಪ್ರಿಯಾಂಕಾ ಗಾಂಧಿ ಬೆವರಿಳಿಸಿದ ಅನುರಾಗ್ ಠಾಕೂರ್

ಗಾಯಗೊಂಡ ಅಧಿಕಾರಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದ್ದು, ಡಿ.ಜೆ. ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಯಾರಬ್ ಮತ್ತು ದಸ್ತಗೀರ್‌ರನ್ನು ಬಂಧಿಸಿದ್ದಾರೆ.

ಪೋಲಿಸರು ಆರೋಪಿಗಳಾದ ಯಾರಬ್, ದಸ್ತಗೀರ್, ಇಕ್ಬಾಲ್ ಹಾಗೂ ಇತರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS), 2023 ರ ಕಾಯ್ದೆಯಡಿ (ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ) ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *