“ನಾಳಿನ ನೀರಿಗಾಗಿ ಇಂದೇ ಸಸಿ ನೆಡಿ”: ಪುತ್ತೂರು ವಕೀಲರ ಸಂಘದಿಂದ ಸಸಿ ನೆಡುವ ಕಾರ್ಯಕ್ರಮ

ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ಪುತ್ತೂರು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ, ಹರಿದ್ವರ್ಣ ನೇಚರ್ ಕ್ಲಬ್ ಮತ್ತು ವಲಯ ಅರಣ್ಯ ಇಲಾಖೆ ಪುತ್ತೂರು ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವು ಶನಿವಾರ ಆನೆಮಜಲಿನ ವಕೀಲರ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಸದಾನಂದ ನಾಗಪ್ಪ ನಾಯ್ಕ್ ಅವರು, “ಸಸಿ ನೆಡುವುದು ಕೇವಲ ಪರಿಸರದ ಉಳಿವಿಗಲ್ಲ, ಅದು ಮುಂದಿನ ಪೀಳಿಗೆಗೆ ನೀಡುವ ಅಮೂಲ್ಯ ಕೊಡುಗೆಯಾಗಿದೆ. ಗಿಡ ಮರಗಳು ಎಲ್ಲ ಋತುಗಳಲ್ಲೂ ಬೆಳೆಯುವಂತೆ, ನಮ್ಮ ಜೀವನದಲ್ಲಿಯೂ ನಿರಂತರ ಪ್ರಗತಿ ಸಾಧಿಸಬೇಕು” ಎಂದು ಹೇಳಿದರು.

ಹರಿದ್ವರ್ಣ ನೇಚರ್ ಕ್ಲಬ್ ಅಧ್ಯಕ್ಷ ಹಾಗೂ ವಕೀಲ ಕೆ. ಭಾಸ್ಕರ ಕೋಡಿಂಬಾಳ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಸಿ ನೆಡುವುದರೊಂದಿಗೆ ಅವುಗಳನ್ನು ಪೋಷಿಸಿ ಬೆಳೆಸುವ ಮನೋಭಾವ ಬೆಳೆಸಿದಾಗ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಇಲ್ಲದಿದ್ದರೆ ಭವಿಷ್ಯದಲ್ಲಿ ನೀರಿನ ಕೊರತೆ ಸೇರಿದಂತೆ ಹಲವು ಪರಿಸರ ಸಮಸ್ಯೆಗಳು ಎದುರಾಗಲಿವೆ ಎಂದು ಎಚ್ಚರಿಸಿದರು.

ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ನೂತನ ಆಡಳಿತ ಮಂಡಳಿಯ ಮೊದಲ ಕಾರ್ಯಕ್ರಮವನ್ನು ಪರಿಸರಕ್ಕೆ ಸಮರ್ಪಿಸಿರುವುದು ಸಂತಸದ ಸಂಗತಿ. ಹರಿದ್ವರ್ಣ ನೇಚರ್ ಕ್ಲಬ್ ಕೈಗೊಂಡಿರುವ ಪರಿಸರಪರ ಚಟುವಟಿಕೆಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ: ಪುತ್ತೂರು: ನರಿಮೊಗರಿನಲ್ಲಿ ಮತ್ತೆ ಪುತ್ತಿಲ ಪರಿವಾರದಿಂದ ಪ್ರತಿಭಟನೆ, ಗುಡುಗಿದ ಅರುಣ್ ಕುಮಾರ್ ಪುತ್ತಿಲ

ಈ ವೇಳೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುಮಂಗಲಾ ಚಕಲಬ್ಬಿ ಅವರು ಹರಿದ್ವರ್ಣ ನೇಚರ್ ಕ್ಲಬ್‌ನ ನೂತನ ಟಿ-ಶರ್ಟ್ ಅನ್ನು ಅನಾವರಣಗೊಳಿಸಿದರು.

ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಹಾಗೂ ಪುತ್ತೂರು ಎಸಿಜೆಎಂ ಪ್ರಕೃತಿ ಕಲ್ಯಾಣ್‌ಪುರ್, 1ನೇ ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಹಾಗೂ ಪುತ್ತೂರು ಜೆಎಂಎಫ್‌ಸಿ ದೇವರಾಜ್ ವೈ.ಎಚ್., ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಹಾಗೂ ಪುತ್ತೂರು ಜೆಎಂಎಫ್‌ಸಿ ಕು. ಆರ್. ರಮ್ಯಾ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಹರಿದ್ವರ್ಣ ನೇಚರ್ ಕ್ಲಬ್ ಸದಸ್ಯರು, ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯರು ಪಾಲ್ಗೊಂಡರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *