ದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನಕಾರಿ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿದ್ದ 15 ವರ್ಷದ ಬಾಲಕಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಕ್ಷಮೆಯಾಚಿಸಿದ್ದಾಳೆ. ಇತರರ ಪ್ರಚೋದನೆಗೆ ಒಳಗಾಗಿ ತಾವು ಈ ತಪ್ಪು ಮಾಡಿರುವುದಾಗಿ ಆಕೆ ವೀಡಿಯೊ ಮೂಲಕ ಸ್ಪಷ್ಟಪಡಿಸಿದ್ದಾಳೆ.
ಆರೋಪಿ ವಿದ್ಯಾರ್ಥಿಗಳನ್ನು ಕ್ಷಮಿಸುವುದಾಗಿ ಹಾಗೂ ಅವರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಜರುಗಿಸದೆ ಸನ್ಮಾರ್ಗದಲ್ಲಿ ನಡೆಸುವಂತೆ ಪ್ರಧಾನಿ ಮೋದಿ ಅವರು ಸಾರ್ವಜನಿಕರಲ್ಲಿ ವಿನಂತಿಸಿದ ಬೆನ್ನಲ್ಲೇ ಈ ಕ್ಷಮೆಯಾಚನೆಯ ವೀಡಿಯೊ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ 15 ವರ್ಷದ ಬಾಲಕಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೋರಿದ್ದಾಳೆ. “ನಾನು ಸ್ನೇಹಿತರೊಂದಿಗೆ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿದ್ದೆ. ಅಲ್ಲಿ ಹಲವು ಗುಂಪುಗಳು ಪ್ರಧಾನಿ ಮೋದಿ ವಿರುದ್ಧ ನಿಂದನಕಾರಿ ಮಾತುಗಳನ್ನು ಆಡುತ್ತಿದ್ದವು. ನಾನು ಅವರ ಪ್ರಭಾವಕ್ಕೆ ಒಳಗಾಗಿ ಅನಗತ್ಯ ಹಾಗೂ ಅನುಚಿತ ಮಾತುಗಳನ್ನಾಡಿದೆ. ಇದು ನನ್ನ ಮೊದಲ ಹಾಗೂ ಕೊನೆಯ ತಪ್ಪಾಗಿದ್ದು, ಇನ್ನೆಂದೂ ಇಂತಹ ಕೆಲಸ ಮಾಡುವುದಿಲ್ಲ. ಇಡೀ ದೇಶದ ಜನತೆಯಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ. ತೀವ್ರ ನಾಚಿಕೆಯಿಂದ ತಲೆ ಎತ್ತಲಾಗದ ಸ್ಥಿತಿಯಲ್ಲಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿ.” ಎಂದು ಕೇಳಿಕೊಂಡಿದ್ದಾಳೆ.
ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಆದೇಶದ ವಿರುದ್ಧ ಮೇಲ್ಮನವಿಗೆ ರಾಜ್ಯ ಸರ್ಕಾರ ತೀರ್ಮಾನ
ಇದಕ್ಕೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಯುವಜನತೆಯ ನಡೆಗೆ ಪ್ರತಿಕ್ರಿಯಿಸಿದ್ದರು. “ಜಂತರ್ ಮಂತರ್ ಪ್ರತಿಭಟನೆ ವೇಳೆ ದಾರಿ ತಪ್ಪಿದ ಕೆಲವು ಯುವಕರು ನನ್ನ ಹಾಗೂ ನನ್ನ ದಿವಂಗತ ತಾಯಿಯವರ ವಿರುದ್ಧವೂ ಅನುಚಿತ ಭಾಷೆ ಬಳಸಿದ್ದನ್ನು ದೇಶ ಕಂಡಿದೆ. ಆದರೆ ಯುವಕರು ಹೆಚ್ಚಾಗಿ ಉದ್ವೇಗದಲ್ಲಿ ತಪ್ಪು ಮಾಡುತ್ತಾರೆ, ಅವರಿಗೆ ಅದರಿಂದ ಕಲಿಯಲು ಅವಕಾಶ ನೀಡಬೇಕು. ನಾನು ಅವರನ್ನು ಕ್ಷಮಿಸಲು ಬಯಸುತ್ತೇನೆ. ವಿದ್ಯಾರ್ಥಿಗಳನ್ನು ಹಾಗೂ ಅವರ ಕುಟುಂಬಗಳನ್ನು ದೀರ್ಘಕಾಲದ ಕಾನೂನು ಸಂಕಷ್ಟಕ್ಕೆ ಸಿಲುಕಿಸಬೇಡಿ. ನಾಲಿಗೆಯು ಅಕಸ್ಮಾತ್ತಾಗಿ ಹಲ್ಲಿನ ನಡುವೆ ಸಿಲುಕಿ ಕಡಿದುಕೊಂಡಂತೆ, ಈ ಯುವಕರು ನಮ್ಮವರೇ. ಅವರನ್ನು ಸಮಾಜದಿಂದ ಹೊರಗಿಡುವ ಬದಲು ಸೂಕ್ತ ಮಾರ್ಗದರ್ಶನ ನೀಡಬೇಕು” ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

