ಸುಳ್ಯ: ನಗರದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಚಾಲಕರ ಅನುಕೂಲಕ್ಕಾಗಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಭಾರತೀಯ ಮಜ್ದೂರ್ ಸಂಘದ ಆಟೋ ಚಾಲಕರ ಘಟಕವು ಸ್ಥಳೀಯ ಶಾಸಕರು ಹಾಗೂ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸುಳ್ಯ ಪಟ್ಟಣದಲ್ಲಿ ಸೂಕ್ತ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಿದರೆ ವಾಹನ ಚಾಲಕರು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಇಂತಹ ಮೂಲಸೌಕರ್ಯ ಅತ್ಯಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಕಾವು ಭೀಕರ ಅಪಘಾತ: 2 ಮೀಟರ್ ದೂರಕ್ಕೆ ವಿದ್ಯುತ್ ಕಂಬ ಎತ್ತೊಯ್ದ ಕಾರು!
ಈ ಸಂಬಂಧ ಭಾರತೀಯ ಮಜ್ದೂರ್ ಸಂಘದ ಪ್ರತಿನಿಧಿಗಳು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಮೆಸ್ಕಾಂ ಸುಳ್ಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ., ಕೋಶಾಧಿಕಾರಿ ರವಿ ಎಸ್, ಸಂಘಟನಾ ಕಾರ್ಯದರ್ಶಿ ಸುಂದರ್ ಪೆರಾಜೆ, ಜಂಟಿ ಕಾರ್ಯದರ್ಶಿ ಸುರೇಂದ್ರ ಕಾಮತ್, ನಿರ್ದೇಶಕರಾದ ಭಾನು ಪ್ರಕಾಶ್ ಹಾಗೂ ಹರೀಶ್ ನೆಕ್ರಾಜೆ ಉಪಸ್ಥಿತರಿದ್ದರು.

