ಮಹಾರಾಷ್ಟ್ರ: ಮೊಬೈಲ್ ಫೋನ್ ಬಳಕೆಯ ವಿಚಾರವಾಗಿ ನಡೆದ ಸಣ್ಣ ಮನಸ್ತಾಪವೊಂದು ಒಂದೇ ಕುಟುಂಬದ ಮೂವರ ದಾರುಣ ಅಂತ್ಯಕ್ಕೆ ಕಾರಣವಾಗಿರುವ ಕಟು ಸತ್ಯ ಮಹಾರಾಷ್ಟ್ರದಲ್ಲಿ ನಡೆದಿದೆ. 19 ವರ್ಷದ ಯುವಕನೊಬ್ಬ ಪ್ರಪಾತಕ್ಕೆ ಧುಮುಕಿದ್ದು, ಆತನನ್ನು ರಕ್ಷಿಸಲು ಹೋದ ತಂದೆ ಹಾಗೂ ಮಗನ ವಿಯೋಗ ತಾಳಲಾರದೆ ತಾಯಿಯೂ ಬಲಿಯಾಗಿದ್ದಾರೆ.
19 ವರ್ಷದ ಯುವಕ ಮತ್ತು ಆತನ ಪೋಷಕರ ನಡುವೆ ಮೊಬೈಲ್ ಫೋನ್ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಾಗ್ವಾದ ಹಾಗೂ ಗಲಾಟೆ ನಡೆದಿದೆ.ತೀವ್ರ ಕೋಪ ಹಾಗೂ ಭಾವುಕತೆಗೆ ಒಳಗಾದ ಯುವಕ ನೇರವಾಗಿ ಸಮೀಪದಲ್ಲಿದ್ದ ಪ್ರಪಾತಕ್ಕೆ (Cliff) ಜಿಗಿದಿದ್ದಾನೆ. ಈ ವೇಳೆ ಆತನನ್ನು ತಡೆದು ರಕ್ಷಿಸಲು ಮುಂದಾದ ತಂದೆಯನ್ನೂ ಮಗ ತನ್ನೊಂದಿಗೆ ಕೆಳಗೆ ಎಳೆದೊಯ್ದಿದ್ದರಿಂದ ಇಬ್ಬರೂ ಪ್ರಪಾತಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನು ಓದಿ: ಪುತ್ತೂರಿನಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ವಾಗ್ವಾದ, ಹಲ್ಲೆ: ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ಮೇಲೂ ದೂರು ದಾಖಲು
ಕಣ್ಣೆದುರೇ ಗಂಡ ಮತ್ತು ಮಗ ಇಬ್ಬರೂ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದನ್ನು ಕಂಡ ತಾಯಿ ಆಘಾತಕ್ಕೊಳಗಾಗಿದ್ದಾರೆ. ಕ್ಷಣಾರ್ಧದಲ್ಲಿ ವಿಧಿ ಆಟಕ್ಕೆ ಬೆಚ್ಚಿಬಿದ್ದ ಆಕೆಯೂ ಕೆಲವೇ ಕ್ಷಣಗಳಲ್ಲಿ ಅದೇ ಪ್ರಪಾತಕ್ಕೆ ಧುಮುಕಿ ಪ್ರಾಣ ಕಳೆದುಕೊಂಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಣ್ಣ ವಿಚಾರಕ್ಕೆ ಕೋಪ ನಿಯಂತ್ರಿಸಲಾಗದೆ ಸಂಪೂರ್ಣ ಕುಟುಂಬವೇ ಇಲ್ಲವಾದದ್ದು ಸ್ಥಳೀಯರಲ್ಲಿ ತೀವ್ರ ಶೋಕ ತಂದೊಡ್ಡಿದೆ.

