ದೆಹಲಿ: ಆಮ್ಸ್ಟಲ್ವೀನ್ನ ವ್ಯಾಗನರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ಎಫ್ಐಎಚ್ (FIH) ಪುರುಷರ ಹಾಕಿ ವಿಶ್ವಕಪ್ನ ಪೂಲ್ ‘ಇ’ (Pool E) ಎರಡನೇ ಹಂತದ ಪಂದ್ಯದಲ್ಲಿ ಭಾರತ ತಂಡ ಇಂದು ಬಲಿಷ್ಠ ಅರ್ಜೆಂಟೀನಾ ವಿರುದ್ಧ ಸೆಣೆಸಾಡಲಿದೆ. ಎರಡನೇ ಹಂತದ ಮೊದಲ ಪಂದ್ಯದಲ್ಲಿ ಆತಿಥೇಯ ನೆದರ್ಲ್ಯಾಂಡ್ಸ್ ವಿರುದ್ಧ 1-3 ಅಂತರದಿಂದ ಆಘಾತಕಾರಿ ಸೋಲು ಅನುಭವಿಸಿದ ಭಾರತೀಯ ಹಾಕಿ ತಂಡದ ಸೆಮಿಫೈನಲ್ ಹಾದಿ ಈಗ ಅತ್ಯಂತ ಕ್ಲಿಷ್ಟಕರವಾಗಿದೆ.
ಸೆಮಿಫೈನಲ್ ರೇಸ್ನಲ್ಲಿ ಉಳಿಯಬೇಕಾದರೆ ಭಾರತ ತಂಡ ಅರ್ಜೆಂಟೀನಾ ವಿರುದ್ಧ ಕನಿಷ್ಠ 3 ಗೋಲುಗಳ ಅಂತರದಿಂದ ಬೃಹತ್ ಗೆಲುವು ಸಾಧಿಸಬೇಕಾಗಿದೆ. ಭಾರತ ಕೇವಲ ಗೆದ್ದರೆ ಸಾಲದು, ಪೂಲ್ ‘ಇ’ ನ ಮತ್ತೊಂದು ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ವಿರುದ್ಧ ಕನಿಷ್ಠ 2 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಬೇಕಿದೆ.
ನೆದರ್ಲ್ಯಾಂಡ್ಸ್ ಈಗಾಗಲೇ 6 ಅಂಕಗಳೊಂದಿಗೆ ಸೆಮಿಫೈನಲ್ಗೆ ಅರ್ಹತೆ ಪಡೆದಿದ್ದು, ಎರಡನೇ ಸ್ಥಾನಕ್ಕಾಗಿ ಇಂಗ್ಲೆಂಡ್, ಅರ್ಜೆಂಟೀನಾ ಮತ್ತು ಭಾರತ ನಡುವೆ ತೀವ್ರ ಪೈಪೋಟಿ ನಡೆದಿದೆ. ಪ್ರಸಕ್ತ ಸಾಲಿನ ಎಫ್ಐಎಚ್ ಪ್ರೋ ಲೀಗ್ನಲ್ಲಿ ಅರ್ಜೆಂಟೀನಾ ವಿರುದ್ಧ ಭಾರತ 0-8 ಮತ್ತು 2-4 ಅಂತರದಲ್ಲಿ ಮುಖಭಂಗ ಅನುಭವಿಸಿತ್ತು. ಹೀಗಾಗಿ ಅರ್ಜೆಂಟೀನಾವನ್ನು ಮಣಿಸುವುದು ಭಾರತಕ್ಕೆ ಸವಾಲಿನ ಕೆಲಸವಾಗಿದೆ.
ಇದನ್ನೂ ಓದಿ: ಮೊಬೈಲ್ ಫೋನ್ ವಿಚಾರಕ್ಕೆ ಕುಟುಂಬದಲ್ಲಿ ಗಲಾಟೆ: ಪ್ರಪಾತಕ್ಕೆ ಜಿಗಿದು ಒಂದೇ ಕುಟುಂಬದ ಮೂವರ ದಾರುಣ ಸಾವು
ನಾಯಕ ಹರ್ಮನ್ಪ್ರೀತ್ ಸಿಂಗ್ ಇದುವರೆಗೆ 6 ಗೋಲುಗಳನ್ನು ಗಳಿಸಿ ಉತ್ತಮ ಫಾರ್ಮ್ನಲ್ಲಿದ್ದರೂ, ಮುಂಚೂಣಿ ಸಾಲಿನ ಫಾರ್ವರ್ಡ್ ಆಟಗಾರರಾದ ಅಭಿಷೇಕ್ ಮತ್ತು ದಿಲ್ಪ್ರೀತ್ ಸಿಂಗ್ ಅವರಿಂದ ಹೆಚ್ಚಿನ ಪ್ರದರ್ಶನ ನಿರೀಕ್ಷಿಸಲಾಗಿದೆ.

