ದೆಹಲಿ: ಜುಲೈ 20 ರ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಯಲ್ಲಿ ಭಾಗವಹಿಸಿ ಎಫ್‌ಐಆರ್ (FIR) ಎದುರಿಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಸುಪ್ರೀಂ ಕೋರ್ಟ್ ಭಾರೀ ಸಮಾಧಾನಕರ ತೀರ್ಪು ನೀಡಿದೆ. ಜುಲೈ 20 ರಿಂದ 25 ರ ನಡುವೆ ದೇಶಾದ್ಯಂತ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ ಎಲ್ಲಾ ಎಫ್‌ಐಆರ್‌ಗಳನ್ನು ರದ್ದುಗೊಳಿಸಿ (Quash) ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ, ಸಿಜೆಪಿ ಪಕ್ಷವು ಮುಂಬರುವ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಿಂಪಡೆದುಕೊಂಡಿದೆ. ಜುಲೈ 20 ರ ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲಾಗುವುದು ಮತ್ತು ಭವಿಷ್ಯದಲ್ಲಿ ಯಾವುದೇ ಹೊಸ ಪ್ರಕರಣ ದಾಖಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ನೀಡಿದ ಭರವಸೆಯ ನಂತರ ಪೀಠವು ಈ ಆದೇಶ ಹೊರಡಿಸಿದೆ.
ಗಂಭೀರ ಅಪರಾಧ ಹಿನ್ನೆಲೆ (Criminal Antecedents) ಹೊಂದಿರುವ ಹಾಗೂ ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 2,873 ವ್ಯಕ್ತಿಗಳ ವಿರುದ್ಧದ ಒಂದು ಎಫ್‌ಐಆರ್ ಕುರಿತು ತನಿಖೆ ಮುಂದುವರಿಸಲು ದೆಹಲಿ ಪೊಲೀಸರಿಗೆ ಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠವು, “ಉಭಯ ಪಕ್ಕದವರು ನಂಬಿಕೆಯಿಂದ ಮಾತನಾಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ” ಎಂದಿತು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ನಾವು ಶತ್ರುಗಳಲ್ಲ, ರಚನಾತ್ಮಕವಾಗಿ ನಿರ್ಧಾರ ಕೈಗೊಂಡಿದ್ದೇವೆ” ಎಂದು ತಿಳಿಸಿದರು.
ಇದನ್ನೂ ಓದಿ: ಲೇಸ್, ಮ್ಯಾಗಿ, ಕುರ್ಕುರೆ ದಿನಾಂಕ ತಿದ್ದುಪಡಿ ದಂಧೆ ಬಯಲಿಗೆ: ಎಫ್‌ಡಿಎ ಕಾರ್ಯಾಚರಣೆಗೆ ಬೆಚ್ಚಿಬಿದ್ದ ಖದೀಮರು
ನೀಟ್-ಯುಜಿ ಪರೀಕ್ಷೆ ರದ್ದಾದ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಧನ ನೀಡುವ ಭರವಸೆಯನ್ನು ಈಡೇರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತುಷಾರ್ ಮೆಹ್ತಾ ತಿಳಿಸಿದ್ದು, ಅದಕ್ಕಾಗಿ ಕೋರ್ಟ್ 3 ತಿಂಗಳ ಕಾಲಾವಕಾಶ ನೀಡಿದೆ. ಸುಪ್ರೀಂ ಕೋರ್ಟ್ ಆದೇಶ ಹಾಗೂ ಕೇಂದ್ರ ಸರ್ಕಾರದ ಸಾಕಾರಾತ್ಮಕ ಧೋರಣೆಯನ್ನು ಸ್ವಾಗತಿಸಿದ ಸಿಜೆಪಿ ವಕ್ತಾರ ಸೌರವ್ ದಾಸ್, “ಉನ್ನತ ನ್ಯಾಯಾಲಯದ ಈ ನಿರ್ಧಾರದಿಂದಾಗಿ ನಾವು ಸೆಪ್ಟೆಂಬರ್ 5 ರ ದೆಹಲಿ ಚಲೋ ಪ್ರತಿಭಟನಾ ಕರೆಯನ್ನು ಹಿಂಪಡೆಯುತ್ತಿದ್ದೇವೆ” ಎಂದು ಕೋರ್ಟ್‌ಗೆ ತಿಳಿಸಿದರು.

