ದೆಹಲಿ: ಬಾಂಗ್ಲಾದೇಶದ ಚಟ್ಟೋಗ್ರಾಮ್ನಲ್ಲಿ ಸೇನಾ ತರಬೇತಿಯ ವೇಳೆ ಸಂಭವಿಸಿದ ದುರಂತವೊಂದರಲ್ಲಿ, ಚೀನಾ ನಿರ್ಮಿತ ‘ಟೈಪ್ 59’ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸೇನೆಯ ಉನ್ನತಾಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಟಾಝಾರಿ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಯೋಧರು ಟ್ಯಾಂಕ್ ಮೂಲಕ ಫೈರಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಈ ಆಕಸ್ಮಿಕ ದುರಂತ ಸಂಭವಿಸಿದೆ ಎಂದು ಬಾಂಗ್ಲಾದೇಶದ ‘ಇಂಟರ್-ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರೇಟ್’ ಖಚಿತಪಡಿಸಿದೆ. ಟ್ಯಾಂಕ್ನ ಒಳಗಿದ್ದ ಇಬ್ಬರು ಯೋಧರು ಸ್ಫೋಟದ ತೀವ್ರತೆಗೆ ಮೃತಪಟ್ಟಿದ್ದು, ಅಧಿಕಾರಿಗೆ ತೀವ್ರ ಗಾಯಗಳಾಗಿವೆ. ಮೃತಪಟ್ಟ ಹಾಗೂ ಗಾಯಗೊಂಡ ಯೋಧರ ಹೆಸರು ಮತ್ತು ದರ್ಜೆಯ ವಿವರಗಳನ್ನು ಸೇನೆ ಇನ್ನೂ ಬಹಿರಂಗಪಡಿಸಿಲ್ಲ.
ಗಂಭೀರವಾಗಿ ಗಾಯಗೊಂಡಿರುವ ಅಧಿಕಾರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಡಾಕಾದಲ್ಲಿರುವ ಕಂಬೈನ್ಡ್ ಮಿಲಿಟರಿ ಆಸ್ಪತ್ರೆಗೆ (CMH) ಏರ್ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದ ಇತರ ಯೋಧರಿಗೆ ಯಾವುದೇ ಹಾನಿಯಾಗಿರುವ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಕರಾವಳಿಯಲ್ಲಿ ‘ಹೈಕೋರ್ಟ್ ಪೀಠ’ ಸ್ಥಾಪನೆಗೆ ಆಗ್ರಹ: ರಾಜ್ಯಸಭಾ ಸಂಸದ ಡಾ. ಎಂ. ನಾಗರಾಜ್ಗೆ ಮನವಿ ಸಲ್ಲಿಕೆ
ದುರಂತಕ್ಕೆ ಈಡಾದ ಟ್ಯಾಂಕ್ ಚೀನಾ ಮೂಲದ ‘ಟೈಪ್ 59’ ಮಾದರಿಯದ್ದಾಗಿದ್ದು, ಬಾಂಗ್ಲಾದೇಶ ಸೇನೆ ಇದನ್ನು ಬಳಕೆಯಲ್ಲಿಸಿತ್ತು. ಸ್ಫೋಟವು ಟ್ಯಾಂಕ್ನ ಮದ್ದುಗುಂಡುಗಳಿಂದ , ಗನ್ ಸಿಸ್ಟಮ್ ಅಥವಾ ಇಂಜಿನ್ ಸಮಸ್ಯೆಯಿಂದ ಸಂಭವಿಸಿದೆಯೇ ಎಂಬುದನ್ನು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಇದು ತರಬೇತಿ ವೇಳೆಯಲ್ಲಿ ನಡೆದ ಆಕಸ್ಮಿಕ ಅಪಘಾತವಾಗಿದ್ದು, ಯಾವುದೇ ದಾಳಿ ಅಥವಾ ಶತ್ರುಪಡೆಯ ಕೃತ್ಯವಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

