ಪುದುಚೇರಿ: ದೇಶಾದ್ಯಂತ ಗೌರಿ-ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದ್ದು, ಪುದುಚೇರಿಯಲ್ಲಿ ವಿಘ್ನನಿವಾರಕ ಗಣೇಶನಿಗೆ ಅರ್ಪಿಸಲಾದ ಬೃಹತ್ ಗಾತ್ರದ ಲಡ್ಡೂ ಸಾರ್ವಜನಿಕರ ಹಾಗೂ ಭಕ್ತಾದಿಗಳ ಕಣ್ಣುಸೆಳೆಯುತ್ತಿದೆ.
ಪುದುಚೇರಿಯ 45 ಫೀಟ್ ರೋಡ್ (45 Feet Road) ನಲ್ಲಿರುವ ಪ್ರಸಿದ್ಧ ‘ಶ್ರೀ ಜೈನ್ ಸ್ವೀಟ್’ (Sri Jain Sweet) ಅಂಗಡಿಯಲ್ಲಿ ವಿನಾಯಕ ಚತುರ್ಥಿಯ ಶುಭ ಸಂದರ್ಭದಲ್ಲಿ 121 ಕೆಜಿ ತೂಕದ ಬೃಹತ್ ‘ಮೆಗಾ ಲಡ್ಡು’ (121 kg Mega Laddu) ಸಿದ್ಧಪಡಿಸಿ, ಗಣೇಶನಿಗೆ ಭಕ್ತಿಯಿಂದ ನೈವೇದ್ಯವಾಗಿ ಅರ್ಪಿಸಲಾಗಿದೆ.
ಗಣೇಶೋತ್ಸವದ ಅಂಗವಾಗಿ ಪ್ರತಿವರ್ಷ ವಿಭಿನ್ನವಾಗಿ ಹಬ್ಬ ಆಚರಿಸುವ ಶ್ರೀ ಜೈನ್ ಸ್ವೀಟ್ಸ್ ಆಡಳಿತ ಮಂಡಳಿಯು, ಈ ಬಾರಿ ಬೃಹತ್ ಆಕಾರದ ಮೋದಕ/ಲಡ್ಡೂ ತಯಾರಿಸಿ ಗಣೇಶನಿಗೆ ಪೂಜೆ ಸಲ್ಲಿಸಿದೆ.ಪರಿಣಿತ ಸಿಹಿ ತಿನಿಸು ತಯಾರಕರು ಹಲವು ಗಂಟೆಗಳ ಕಾಲ ಶ್ರಮಿಸಿ, ಸಾಂಪ್ರದಾಯಿಕ ಪದಾರ್ಥಗಳನ್ನು ಬಳಸಿ ಈ ಬೃಹತ್ 121 ಕೆಜಿ ಲಡ್ಡೂವನ್ನು ಸಿದ್ಧಪಡಿಸಿದ್ದಾರೆ.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬದ ಶುಭ ದಿನದಂದು ಮಗನ ಹೆಸರು ಬಹಿರಂಗಪಡಿಸಿದ ‘ಡಾಲಿ’ ಧನಂಜಯ: ಪುತ್ರನಿಗೆ ರಾಜ ಗಾಂಭೀರ್ಯದ ‘ಎರೆಯ’ ನಾಮಕರಣ
ಅಂಗಡಿಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ಮೂರ್ತಿಯ ಮುಂದೆ ಈ ಬೃಹತ್ ಲಡ್ಡೂವನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ದಾರಿಯಲ್ಲಿ ಹೋಗುವ ಸಾರ್ವಜನಿಕರು ಹಾಗೂ ವಿಶೇಷ ಪೂಜೆಗೆ ಆಗಮಿಸುವ ಭಕ್ತರು ಲಡ್ಡೂ ಕಣ್ತುಂಬಿಕೊಂಡು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಪೂಜಾ ವಿಧಿವಿಧಾನಗಳ ನಂತರ ಈ ಮಹಾ ಪ್ರಸಾದವನ್ನು ಭಕ್ತಾದಿಗಳಿಗೆ ಹಂಚಲಾಗುವುದು ಎಂದು ಪ್ರಬಂಧಕರು ತಿಳಿಸಿದ್ದಾರೆ.

