Breaking News

ಉಡುಪಿಯಲ್ಲಿ ಗಣೇಶೋತ್ಸವ ಮತ್ತು ವಿಸರ್ಜನೆ ಹಿನ್ನೆಲೆ 3 ದಿನ ಮದ್ಯ ಮಾರಾಟ ನಿಷೇಧ: ಡಿಸಿ ತೇಜಸ್ವಿನಿ ಕೆ. ಸ್ವರೂಪ ಆದೇಶ

ಉಡುಪಿ: ಗೌರಿ-ಗಣೇಶ ಹಬ್ಬದ ಸಂಭ್ರಮ ಹಾಗೂ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಪಾಲನೆಗಾಗಿ ಉಡುಪಿ ಜಿಲ್ಲಾಡಳಿತವು ಮೂರು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ (Dry Days) ಖಡಕ್ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿ ಟಿ. ಕೆ. ಸ್ವರೂಪ (T K Swaroopa) ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಗಣೇಶೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮದ್ಯ ನಿಷೇಧದ ದಿನಾಂಕ ಹಾಗೂ ಸಮಯದ ವಿವರ:

ಸೆಪ್ಟೆಂಬರ್ 14 (ಇಡೀ ಜಿಲ್ಲೆಯಾದ್ಯಂತ):

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಂದು ಬೆಳಿಗ್ಗೆ 6:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸೆಪ್ಟೆಂಬರ್ 16 (ಉಡುಪಿ ನಗರ ವ್ಯಾಪ್ತಿ):

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆ ನಡೆಯುವ ಹಿನ್ನೆಲೆಯಲ್ಲಿ ಮಧ್ಯಾಹ್ನ 2:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ ಮದ್ಯ ಮಾರಾಟ ಬಂದ್ ಆಗಿರಲಿದೆ.

ಇದನ್ನೂ ಓದಿ: ಗೌರಿ-ಗಣೇಶ ಹಬ್ಬದ ಶುಭ ದಿನದಂದು ಮಗನ ಹೆಸರು ಬಹಿರಂಗಪಡಿಸಿದ ‘ಡಾಲಿ’ ಧನಂಜಯ: ಪುತ್ರನಿಗೆ ರಾಜ ಗಾಂಭೀರ್ಯದ ‘ಎರೆಯ’ ನಾಮಕರಣ

ಸೆಪ್ಟೆಂಬರ್ 18 (ವಿವಿಧ ಪೊಲೀಸ್ ಠಾಣಾ ವ್ಯಾಪ್ತಿ):

ವಿವಿಧ ತಾಲೂಕು ಹಾಗೂ ಹಳ್ಳಿಗಳಲ್ಲಿ ಬೃಹತ್ ಶೋಭಾಯಾತ್ರೆ ಮತ್ತು ವಿಸರ್ಜನೆ ನಡೆಯಲಿದ್ದು, ಗಂಗೊಳ್ಳಿ, ಕುಂದಾಪುರ ಪಟ್ಟಣ ಹಾಗೂ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ ಮಧ್ಯಾಹ್ನ 2:00 ಗಂಟೆಯಿಂದ ಮಧ್ಯರಾತ್ರಿ 12:00 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಬಾರ್, ವೈನ್ ಶಾಪ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ

ನಿಗದಿತ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳು, ಬಾರ್ & ರೆಸ್ಟೋರೆಂಟ್‌ಗಳು, ವೈನ್ ಶಾಪ್‌ಗಳು ಹಾಗೂ ಮದ್ಯ ಮಾರಾಟದ ಸನ್ನದು ಹೊಂದಿರುವ ಎಲ್ಲಾ ಸಂಸ್ಥೆಗಳು ಶೇಕಡಾ 100ರಷ್ಟು ಮಾರಾಟವನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಆದೇಶ ಉಲ್ಲಂಘಿಸುವವರ ವಿರುದ್ಧ ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *