ಚಿಕ್ಕಮಗಳೂರು: ಧರ್ಮ, ಜಾತಿಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕಲುಷಿತ ವಾತಾವರಣದ ನಡುವೆಯೂ, ಮಲೆನಾಡಿನ ಎನ್.ಆರ್. ಪುರ (ನರಸಿಂಹರಾಜಪುರ) ಪಟ್ಟಣದಲ್ಲಿ ಸೌಹಾರ್ದತೆಯ ಸುಂದರ ಮೇಲ್ಪಂಕ್ತಿ ಅನಾವರಣಗೊಂಡಿದೆ. ಇಲ್ಲಿನ ಮುಸ್ಲಿಂ ಮಹಿಳೆಯೊಬ್ಬರು ಕಳೆದ 18 ವರ್ಷಗಳಿಂದ ಯಶಸ್ವಿಯಾಗಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷೆಯಾಗಿ ಪೂಜಾ ಕೈಂಕರ್ಯಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಎನ್.ಆರ್. ಪುರ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷೆಯೂ ಆಗಿರುವ ಜುಬೇದಾ, ರಾಜೀವನಗರದ ‘ಶ್ರೀ ವಿನಾಯಕ ಸೇವಾ ಸಮಿತಿ’ಯ ಅಧ್ಯಕ್ಷೆಯಾಗಿ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ.
ರಾಜೀವನಗರದಲ್ಲಿ ಪ್ರತಿವರ್ಷ ಮೂರು ದಿನಗಳ ಕಾಲ ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಸಮಿತಿಯ ಅಧ್ಯಕ್ಷೆಯಾಗಿ ಜುಬೇದಾ ಅವರೇ ಖುದ್ದಾಗಿ ನಿಂತು ಗಣಪತಿ ಹೋಮ, ಸತ್ಯನಾರಾಯಣ ಪೂಜೆ ಸೇರಿದಂತೆ ಎಲ್ಲಾ ವೈದಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಡುತ್ತಾರೆ.
ಪಂಡಾಲಿನ ಆವರಣವನ್ನು ಸಗಣಿಯಿಂದ ಸಾರಿಸಿ, ಬಣ್ಣ ಬಣ್ಣದ ರಂಗೋಲಿಗಳಿಂದ ಸಿಂಗರಿಸಲು ಸ್ಥಳೀಯ ಮಹಿಳೆಯರಿಗೆ ಇವರೇ ಪ್ರೇರೇಪಿಸುತ್ತಾರೆ. ಗಣೇಶ ಮೂರ್ತಿಯ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಸಂಪೂರ್ಣ ಜವಾಬ್ದಾರಿಯನ್ನು ಹೊರತ್ತಾರೆ. ಪಟ್ಟಣದ ಅಶ್ವತ್ಥಕಟ್ಟೆ ಸಮೀಪದ ನಾಗರಬಾಣದಲ್ಲಿ ನಡೆಯುವ ‘ಕಾರ್ತಿಕ ದೀಪೋತ್ಸವ ಸಮಿತಿ’ಯ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಸ್ವಗೃಹವನ್ನು ದೀಪಗಳಿಂದ ಅಲಂಕರಿಸುವ ಜುಬೇದಾ, ಊರಿನ ಇತರ ಗಣೇಶ ಪಂಡಾಲ್ಗಳಿಗೂ ಭೇಟಿ ನೀಡಿ ಪ್ರಸಾದ ಸ್ವೀಕರಿಸುತ್ತಾರೆ. ತಮ್ಮ ಈ ಸೇವೆ ಹಾಗೂ ನಿಲುವಿನ ಕುರಿತು ಮಾತನಾಡಿರುವ ಜುಬೇದಾ, “ನಾನು ಮೊದಲನೆಯದಾಗಿ ಭಾರತೀಯಳು. ಧರ್ಮ ಮತ್ತು ಜಾತಿ ಆಮೇಲೆ ಬರುತ್ತದೆ. ನನ್ನ ಸ್ವಧರ್ಮಕ್ಕೆ ನಿಷ್ಠಳಾಗಿದ್ದುಕೊಂಡೇ ಇತರ ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ನನಗೆ ಧರ್ಮಕ್ಕಿಂತ ಮಾನವೀಯತೆಯೇ ಮುಖ್ಯ. ನಾವು ಹಿಂದೂ ಹಬ್ಬಗಳಲ್ಲಿ ಪಾಲ್ಗೊಂಡಾಗ, ಅವರು ನಮ್ಮ ಮುಸ್ಲಿಂ ಹಬ್ಬಗಳಲ್ಲಿ ಪ್ರೀತಿಯಿಂದ ಭಾಗವಹಿಸುತ್ತಾರೆ. ನಮ್ಮೂರಿನಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ,” ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಇದನ್ನೂ ಓದಿ: ಗೌರಿ-ಗಣೇಶ ಹಬ್ಬದ ಶುಭ ದಿನದಂದು ಮಗನ ಹೆಸರು ಬಹಿರಂಗಪಡಿಸಿದ ‘ಡಾಲಿ’ ಧನಂಜಯ: ಪುತ್ರನಿಗೆ ರಾಜ ಗಾಂಭೀರ್ಯದ ‘ಎರೆಯ’ ನಾಮಕರಣ
ಸ್ಥಳೀಯ ನಿವಾಸಿ ಶಾಂತಮ್ಮ ಅವರ ಪ್ರಕಾರ, ಜುಬೇದಾ ಅವರು ಕೇವಲ ಹಬ್ಬ ಆಚರಿಸುವುದಷ್ಟೇ ಅಲ್ಲದೆ, ಬಡ ಹಾಗೂ ಸಂಕಷ್ಟದಲ್ಲಿರುವ ಹಿಂದೂ ಮಹಿಳೆಯರಿಗೆ ಸ್ವಂತ ಹಣದಿಂದ ನೆರವಾಗುತ್ತಾರೆ. ಬಡ ಮಹಿಳೆಯರು ಸ್ವಾವಲಂಬಿಗಳಾಗಲು ಉಚಿತ ಹೊಲಿಗೆ ತರಬೇತಿ ಕೇಂದ್ರವನ್ನೂ ನಡೆಸುತ್ತಿದ್ದಾರೆ. ನೇತಾಜಿ ಯುವಕ ಸಂಘದ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಎಸ್ಇ ಪರಮೇಶ್ವರ ಮಾತನಾಡಿ, “ಧರ್ಮದ ಹೆಸರಿನಲ್ಲಿ ದ್ವೇಷದ ಬೀಜ ಬಿತ್ತುವವರು ಜುಬೇದಾ ಅವರ ಬದುಕನ್ನು ನೋಡಿ ಕಲಿಯಬೇಕಾಗಿದೆ. ಅವರು ಪ್ರತಿಯೊಂದು ಸಮುದಾಯದ ಜನರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾರೆ,” ಎಂದು ಶ್ಲಾಘಿಸಿದ್ದಾರೆ.

