ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ

ದೆಹಲಿ: ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಮಹಿಳಾ ಏಷ್ಯಾ ಕಪ್ 2026ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 72 ರನ್‌ಗಳ ಭರ್ಜರಿ ಜಯ ಗಳಿಸಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದಾಖಲೆಯ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi) ಅವರಿಂದ ಟ್ರೋಫಿ ಸ್ವೀಕರಿಸಲು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತೀಯ ತಂಡ ನಿರಾಕರಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ.

ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ ಕ್ರಿಕೆಟ್ ತಂಡವು ಅನುಸರಿಸಿಕೊಂಡು ಬರುತ್ತಿರುವ ‘ನೋ-ಹ್ಯಾಂಡ್‌ಶೇಕ್’ (ಕೈಕುಲುಕದಿರುವುದು) ಹಾಗೂ ಪಾಕಿಸ್ತಾನಿ ಅಧಿಕಾರಿಗಳಿಂದ ಗೌರವ ಸ್ವೀಕರಿಸದಿರುವ ನೀತಿಯನ್ನು ಮಹಿಳಾ ತಂಡವೂ ಮುಂದುವರಿಸಿದೆ. ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ (Devajit Saikia), ನಖ್ವಿ ಅವರ ಕೈಯಿಂದ ಟ್ರೋಫಿ ಪಡೆಯದಿರುವುದು ಬಿಸಿ‌ಸಿಐ ಈ ಮೊದಲೇ ತೆಗೆದುಕೊಂಡಿದ್ದ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ:

“ಇಂದು ಫೈನಲ್ ಪಂದ್ಯದ ನಂತರ ನಡೆದ ಘಟನೆ ಅತ್ಯಂತ ಸಾಮಾನ್ಯವಾದುದು. ನಮ್ಮ ದೇಶದ ಹಿತಾಸಕ್ತಿ ಮತ್ತು ದೇಶವಾಸಿಗಳ ಗೌರವವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಶತ್ರು ರಾಷ್ಟ್ರದ ಜೊತೆ ಭಾರತ ಪಂದ್ಯವಾಡಬಾರದು ಎಂಬುದು ದೇಶದ ದೊಡ್ಡ ವರ್ಗದ ಅಭಿಪ್ರಾಯವಾಗಿದೆ. ಆದರೂ ನಾವು ಪಂದ್ಯಾವಳಿಯಲ್ಲಿ ಆಡುತ್ತಿದ್ದೇವೆ. ಆದರೆ ಈ ಹಂತದಲ್ಲಿ ನಮಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ವ್ಯಕ್ತಿಗಳಿಂದ ಟ್ರೋಫಿ ಸ್ವೀಕರಿಸದಿರುವುದೇ ನಮ್ಮ ಮುಖ್ಯ ನಿಲುವಾಗಿದೆ,” ಎಂದು ದೇವಜಿತ್ ಸೈಕಿಯಾ ಹೇಳಿದ್ದಾರೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್‌ಗೂ ಮುನ್ನವೇ ಭಾರತಕ್ಕೆ ಮತ್ತೊಂದು ಡೋಪಿಂಗ್ ಆಘಾತ: ಡೋಪ್ ಟೆಸ್ಟ್‌ನಲ್ಲಿ ವಿಫಲರಾದ ಕುಸ್ತಿಪಟು ದೀಪಕ್, ತಂಡದಿಂದ ಹೊರಕ್ಕೆ

ಕಳೆದ ವರ್ಷ ನಡೆದ ಪುರುಷರ ಏಷ್ಯಾ ಕಪ್ ವೇಳೆಯೂ ಭಾರತೀಯ ಪುರುಷರ ತಂಡವು ನಖ್ವಿಯಿಂದ ಟ್ರೋಫಿ ಪಡೆಯಲು ನಿರಾಕರಿಸಿತ್ತು. ನಖ್ವಿ ಅವರು ಟ್ರೋಫಿಯನ್ನು ಬಿಸಿ‌ಸಿಐಗೆ ಹಸ್ತಾಂತರಿಸಲು ನಿರಾಕರಿಸಿದ್ದರಿಂದ, 2025ರ ಪುರುಷರ ಏಷ್ಯಾ ಕಪ್ ಟ್ರೋಫಿ ಇಂದಿಗೂ ಬಿಸಿ‌ಸಿಐ ಕೈಸೇರಿಲ್ಲ. ಈ ಹಿಂದಿನ ಘಟನೆಯೂ ಸಹ ಮಹಿಳಾ ತಂಡದ ಪ್ರಸ್ತುತ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ ಎಂದು ಬಿಸಿ‌ಸಿಐ ಮೂಲಗಳು ತಿಳಿಸಿವೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ