ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ನಗರದಾದ್ಯಂತ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಸವಾರರು ಪರದಾಡುವಂತಾಗಿತ್ತು. ಈ ಕಷ್ಟದ ಸಮಯದಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road) ಕರ್ತವ್ಯ ನಿರ್ವಹಿಸುತ್ತಿದ್ದ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತೋರಿದ ಜವಾಬ್ದಾರಿಯುತ ನಡೆ ಸಾರ್ವಜನಿಕರ ಹೃದಯ ಗೆದ್ದಿದೆ. ರಸ್ತೆಯಲ್ಲಿ ನಿಂತಿದ್ದ ಮಳೆ ನೀರನ್ನು ಹೊರಹಾಕಲು ಅಧಿಕಾರಿ ತಾನೇ ಚರಂಡಿ (Drain) ಕಸವನ್ನು ತೆರವುಗೊಳಿಸಿ ನೀರು ಹರಿದುಹೋಗುವಂತೆ ಹಾದಿ ಸುಗಮಗೊಳಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನೀರು ನಿಂತು ಕಿಲೋಮೀಟರ್‌ಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಈ ವೇಳೆ ಕೇವಲ ವಾಹನ ನಿಯಂತ್ರಿಸುವುದಷ್ಟೇ ಅಲ್ಲದೆ, ತಮ್ಮ ಕರ್ತವ್ಯದ ಗಡಿಯನ್ನು ಮೀರಿ ರಸ್ತೆಯಲ್ಲಿದ್ದ ನೀರು ಸರಾಗವಾಗಿ ಹರಿದು ಹೋಗಲು ತಾವೇ ಮುಂಚೂಣಿಯಲ್ಲಿ ನಿಂತು ಚರಂಡಿ ಮುಚ್ಚಿಕೊಂಡಿದ್ದ ಕಸ-ಕಡ್ಡಿಗಳನ್ನು ಖುದ್ದಾಗಿ ತೆರವುಗೊಳಿಸಿದರು. ಇವರ ಈ ಜವಾಬ್ದಾರಿಯುತ ಕೆಲಸದಿಂದಾಗಿ ರಸ್ತೆಯಲ್ಲಿದ್ದ ನೀರು ಬೇಗನೇ ಖಾಲಿಯಾಗಿ, ವಾಹನ ಸಂಚಾರ ಸುಗಮವಾಯಿತು.
ಇದನ್ನೂ ಓದಿ: 2 ಲಕ್ಷ ಪರಿಹಾರಕ್ಕೆ ರಾಜಿ ಮಾಡಿಕೊಳ್ಳಲು ಬಂದ ಕುಟುಂಬಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಬಿಗ್ ರಿಲೀಫ್
ಇಲ್ಲಿದೆ ನೋಡಿ ವಿಡಿಯೋ:
Amid the chaos caused by heavy rain, a traffic police officer on Old Airport Road in Bengaluru was seen stepping in to clear the flooded stretch and help drain the water.
Small acts of responsibility like this make a big difference. Kudos to the officer for going beyond the call… pic.twitter.com/uAFasPTpyq
— Nagarjun Dwarakanath (@nagarjund) September 15, 2026
ಅಧಿಕಾರಿಯ ಈ ಪುಟ್ಟ ಜವಾಬ್ದಾರಿಯುತ ಹೆಜ್ಜೆ ಸಂಚಾರ ದಟ್ಟಣೆಗೆ ದೊಡ್ಡ ಮಟ್ಟದ ಪರಿಹಾರ ನೀಡಿದೆ. ಈ ದೃಶ್ಯವನ್ನು ಗಮನಿಸಿದ ಸಾರ್ವಜನಿಕರು ಹಾಗೂ ವಾಹನ ಸವಾರರು ಅಧಿಕಾರಿಯ ಸಮಯಪ್ರಜ್ಞೆ ಮತ್ತು ಕರ್ತವ್ಯನಿಷ್ಠೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಖಾಕಿ ಸಮವಸ್ತ್ರದಲ್ಲಿದ್ದರೂ ಜನಸಾಮಾನ್ಯರಿಗೆ ನೆರವಾಗುವ ಇಂತಹ ಅಧಿಕಾರಿಗಳು ನಮ್ಮ ಹೆಮ್ಮೆ” ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

