ದೆಹಲಿ: ಭಾರತೀಯ ಚಿತ್ರರಂಗದ ಅತ್ಯುನ್ನತ ಪುರಸ್ಕಾರವಾದ ‘ದಾದಾಸಾಹೇಬ್ ಫಾಲ್ಕೆ’ (Dadasaheb Phalke Award) ಪ್ರಶಸ್ತಿಗೆ ಭಾಜನರಾಗಿರುವ ಕನ್ನಡ ಚಿತ್ರರಂಗದ ದಂತಕಥೆ, ಹಿರಿಯ ನಟ ಅನಂತ್ ನಾಗ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ. ಅನಂತ್ ನಾಗ್ ಅವರ ಅಪಾರ ಅಭಿನಯ ಕೌಶಲ ಹಾಗೂ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಅನಂತ್ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾದ ಬೆನ್ನಲ್ಲೇ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ.
“ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ದಂತಕಥೆ ಅನಂತ್ ನಾಗ್ ಜೀ ಅವರಿಗೆ ಅಭಿನಂದನೆಗಳು. ಹಲವಾರು ದಶಕಗಳಿಂದ ಅವರ ಸಹಜ ಅಭಿನಯ, ಅಪಾರ ಬಹುಮುಖ ಪ್ರಜ್ಞೆ ಮತ್ತು ಅದ್ಭುತ ಪ್ರತಿಭೆಯು ಭಾರತೀಯ ಚಿತ್ರರಂಗದಲ್ಲಿ, ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಲವಾದ ಮುದ್ರೆಯನ್ನು ಒತ್ತಿದೆ,” ಎಂದು ಬರೆದುಕೊಂಡಿದ್ದಾರೆ.
“ಅವರು ನಿರ್ವಹಿಸಿದ ಪ್ರತಿಯೊಂದು ಪಾತ್ರದಲ್ಲೂ ಅಪರೂಪದ ಆಳ ಮತ್ತು ನೈಜತೆಯನ್ನು ತಂದಿದ್ದಾರೆ. ನಿಜಕ್ಕೂ ಇದು ಒಬ್ಬ ಅತ್ಯಂತ ಶ್ರೇಷ್ಠ ಕಲಾವಿದನಿಗೆ ಸಿಕ್ಕ ಅತ್ಯುನ್ನತ ಮತ್ತು ಅರ್ಹ ಗೌರವವಾಗಿದೆ,” ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಇದನ್ನೂ ಓದಿ: ಗಜ, ಬಚ್ಚನ್ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಪ್ರದೀಪ್ ರಾವತ್ ನಿಧನ
ಕನ್ನಡ ಸೇರಿದಂತೆ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದಲ್ಲೂ ಹಲವು ದಶಕಗಳ ಕಾಲ ನಟಿಸಿ ಲಕ್ಷಾಂತರ ಅಭಿಮಾನಿಗಳ ಮನಗೆದ್ದಿರುವ ಅನಂತ್ ನಾಗ್ ಅವರಿಗೆ ದೇಶಾದ್ಯಂತ ಗಣ್ಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

